ನವದೆಹಲಿ, ಜ. ೮: ಹೊಸ ಕೋವಿಡ್ ನಿಯಮಗಳೊಂದಿಗೆ ಕೇಂದ್ರ ಚುನಾವಣಾ ಆಯೋಗ ಪಂಚರಾಜ್ಯಗಳ ಚುನಾವಣೆಗೆ ದಿನಾಂಕವನ್ನು ಪ್ರಕಟಿಸಿದೆ. ಪಂಜಾಬ್, ಉತ್ತರಾಖಂಡ್, ಗೋವಾ, ಮಣಿಪುರ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಈ ವರ್ಷ ಸಾರ್ವತ್ರಿಕ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕೋವಿಡ್ ನಿಯಮಗಳ ಪಾಲನೆಯೊಂದಿಗೆ ಮತದಾನ ನಡೆಯಲಿದೆ. ಕೋವಿಡ್ ಸುರಕ್ಷತಾ ಕ್ರಮಗಳ ಹಿನ್ನೆಲೆಯಲ್ಲಿ ಮತದಾನದ ಗಡುವನ್ನು ೧ ಗಂಟೆ ಹೆಚ್ಚು ವಿಸ್ತರಿಸಲಾಗಿದೆ ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಚುನಾವಣೆ ಎದುರಿಸಲಿರುವ ೫ ರಾಜ್ಯಗಳಲ್ಲಿ ಇಂದಿನಿAದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ. ಫೆ. ೧೦ ರಿಂದ ಮತದಾನ ಪ್ರಾರಂಭವಾಗಿ ಮಾ. ೭ ವರೆಗೆ ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು ಮಾ. ೧೦ಕ್ಕೆ ಫಲಿತಾಂಶ ಘೋಷಣೆಯಾಗಲಿದೆ. ಪಂಜಾಬ್, ಗೋವಾ, ಉತ್ತರಾಖಂಡ್‌ಗಳಲ್ಲಿ ಫೆ. ೧೪ ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದರೆ, ಮಣಿಪುರದಲ್ಲಿ ಫೆ. ೨೭ ರಂದು ಮೊದಲ ಹಂತ ಹಾಗೂ ಮಾ. ೩ ರಂದು ೨ ನೇ ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ೭ ಹಂತದ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ೭ ಹಂತಗಳ ಮತದಾನ ಫೆ. ೧೦ ರಂದು ಮೊದಲ ಹಂತದ ಮತದಾನ, ಫೆ. ೧೪ ದ್ವಿತೀಯ ಹಂತದ ಮತದಾನ, ಫೆ. ೨೦ ತೃತೀಯ ಹಂತ, ಫೆ. ೨೩ ೪ನೇ ಹಂತ, ಫೆ. ೨೭ ೫ನೇ ಹಂತ, ಮಾ. ೩ ರಂದು ೬ನೇ ಹಂತ, ಮಾ. ೭ ೭ನೇ ಹಂತ, ಮಾ. ೧೦ ರಂದು ಫಲಿತಾಂಶ ಹೊರ ಬೀಳಲಿದೆ ಎಂದು ಅವರು ತಿಳಿಸಿದ್ದಾರೆ.