ಗೋಣಿಕೊಪ್ಪ ವರದಿ, ಜ. ೯: ಕೇರಳದ ಉಳಿಕಲ್‌ನಲ್ಲಿರುವ ಬೈತೂರು ವಾರ್ಷಿಕ ಹಬ್ಬ ಈ ಬಾರಿ ಕೂಡ ಸರಳವಾಗಿ ಆಚರಿಸಲ್ಪಡುತ್ತಿದ್ದು, ಜಿಲ್ಲೆಯಿಂದ ತೆರಳುವವರಿಗೆ ಆರ್‌ಟಿಪಿಸಿಆರ್ ವರದಿ ಕಡ್ಡಾಯವಾಗಿದೆ ಎಂದು ಬೈತೂರು ದೇವಸ್ಥಾನ ಆಡಳಿತ ಸಮಿತಿಯ ಕೊಡಗು ತಕ್ಕಮುಖ್ಯಸ್ಥ ಪುಗ್ಗೇರ ಎ. ಪೊನ್ನಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾ. ೧೩ ರಿಂದ ತಾ. ೨೬ ರವರೆಗೆ ಭಕ್ತರು ಉಳಿಕಲ್‌ಗೆ ಹೋಗಿ ಬರಬಹುದಾಗಿದೆ. ವಸತಿ, ಊಟದ ವ್ಯವಸ್ಥೆ ಇರುವುದಿಲ್ಲ. ಜನಸಂದಣಿ ನಿಯಂತ್ರಣಕ್ಕಾಗಿ ಮೈಮೇಲೆ ದೇವರು ಬರಲು ಕೂಡ ಅವಕಾಶವಿಲ್ಲ. ಕೊಡಗಿನಿಂದ ತೆರಳುವ ಭಕ್ತರು ಆಯುಧಗಳನ್ನು ಪೂಜೆ ಮಾಡಿಕೊಂಡು ಬರಲು ಮಾತ್ರ ಅವಕಾಶವಿದೆ. ಕೊಡಗು-ಕೇರಳ ಗಡಿಯಲ್ಲಿ ಆರ್‌ಟಿಪಿಸಿಆರ್ ವರದಿ ನೀಡುವುದು ಮತ್ತು ೨ ಲಸಿಕೆ ಪಡೆದಿರುವ ದಾಖಲೆ ನೀಡುವುದು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಶಾಸಕ ಕೆ.ಜಿ. ಬೋಪಯ್ಯ, ತಹಶೀಲ್ದಾರ್ ಯೋಗಾನಂದ, ಡಿವೈಎಸ್‌ಪಿ ಸಿ.ಟಿ. ಜಯಕುಮಾರ್ ಅವರೊಂದಿಗೆ ನಾವು ಚರ್ಚಿಸಿ ಸರ್ಕಾರದ ನಿಮಯ ಪಾಲಿಸಲು ನಿರ್ಧರಿಸಿದ್ದೇವೆ. ಬೆಳಗಾವಿಗೆ ತೆರಳುವಾಗ ೧೨ ಬಾರಿ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿರುವುದಾಗಿ ಶಾಸಕ ಬೋಪಯ್ಯ ತಿಳಿಸಿದ್ದು, ನಿಯಮ ಪಾಲನೆ ಮಾಡುವುದು ಕಡ್ಡಾಯ ಎಂದು ಅವರು ತಿಳಿಸಿದ್ದಾರೆ. ಸೋಂಕು ಅಪಾಯ ಎದುರಿಸಲು ಭಕ್ತರೇ ಜವಬ್ದಾರಿ ಹೊತ್ತುಕೊಳ್ಳಬೇಕು. ಹಬ್ಬಕ್ಕೆ ತೆರಳುವುದು ಕಡ್ಡಾಯವಲ್ಲ. ಸಾಂಪ್ರಾದಾಯಿಕ ಬಾಳೋಪಾಟ್ ಮತ್ತು ಜವಬ್ದಾರಿ ಹೊತ್ತಿರುವವರು ಆರ್‌ಟಿಪಿಸಿಆರ್ ವರದಿ ಮತ್ತು ೨ ಬಾರಿ ಲಸಿಕೆ ಪಡೆದ ದಾಖಲಾತಿಯೊಂದಿಗೆ ಹೋಗಿ ಬರಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ. ಅನಾವಶ್ಯಕ ಅಪಾಯ ಎಳೆದುಕೊಳ್ಳಬೇಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.