ಚೆಟ್ಟಳ್ಳಿ, ಜ. ೯: ತಲಕಾವೇರಿ ಭಾಗಮಂಡಲದಲ್ಲಿ ಪ್ರವಾಸಿಗರಿಗೆ ಕಡಿವಾಣ ಹಾಕುವುದು ಬಿಟ್ಟು, ಸ್ಥಳೀಯ ಮೂಲ ನಿವಾಸಿಗಳ ಧಾರ್ಮಿಕ ಆಚರಣೆಗೆ ತಡೆಯೊಡ್ಡಿರುವುದು ಸರಿಯಲ್ಲ, ಈ ಕೂಡಲೇ ಸ್ಥಳೀಯರಿಗೆ ಪಿಂಡ ಪ್ರಧಾನ ಕಾರ್ಯವನ್ನು ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಜಿಲ್ಲಾಡಳಿತ ಹಾಗೂ ಸರಕಾರವನ್ನು ಮನವಿ ಮಾಡಿಕೊಂಡಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಭಾಗಮಂಡಲ ತಲಕಾವೇರಿ ಕ್ಷೇತ್ರ ಸ್ಥಳೀಯ ಮೂಲನಿವಾಸಿಗಳ ಶ್ರದ್ಧಾಭಕ್ತಿಯ ಕೇಂದ್ರವಾಗಿದ್ದು, ಕೊಡವರು ಸೇರಿದಂತೆ ಇಲ್ಲಿನ ಮೂಲ ನಿವಾಸಿಗಳು ಹಾಗೂ ಅನಾದಿಕಾಲದಿಂದಲೂ ಬದುಕು ಕಟ್ಟಿಕೊಂಡ ವಿವಿಧ ಜನಾಂಗಗಳು ಕಾವೇರಿ ಮಾತೆಯೊಂದಿಗೆ ಅವಿನಾಭಾವ ಸಂಬAಧ ಹೊಂದಿದ್ದಾರೆ. ಕೊರೊನಾ ನೆಪದಲ್ಲಿ ಸ್ಥಳೀಯ ಧಾರ್ಮಿಕ ಆಚರಣೆಗೆ ತಡೆಯೊಡ್ಡಿರುವುದು ಸರಿಯಲ್ಲ, ಈಗಾಗಲೇ ತಲಕಾವೇರಿ ಕ್ಷೇತ್ರದಲ್ಲಿ ತೀರ್ಥ ಸ್ನಾನವಿಲ್ಲದೆ ಸ್ಥಳೀಯರ ಕೆಲವೊಂದು ಧಾರ್ಮಿಕ ಕಟ್ಟುಪಾಡುಗಳು ಅಪೂರ್ಣವಾಗಿದ್ದು, ಇದೀಗ ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನಡೆಸಲಾಗುವ ಪಿಂಡ ಪ್ರದಾನಕ್ಕೂ ತಡೆಯೊಡ್ಡಿರುವುದು ಸರಿಯಲ್ಲ. ಕೂಡಲೇ ಸ್ಥಳೀಯರ ಧಾರ್ಮಿಕ ಭಾವನೆಗೆ ಬೆಲೆಕೊಟ್ಟು ಭಾಗಮಂಡಲದಲ್ಲಿ ಪಿಂಡ ಪ್ರದಾನಕ್ಕೆ ಅವಕಾಶ ಮಾಡಿಕೊಡುವುದರೊಂದಿಗೆ ಪಿಂಡ ಪ್ರದಾನ ಮಾಡಿದವರಿಗೆ ತಲಕಾವೇರಿಯಲ್ಲಿ ತೀರ್ಥ ಸ್ನಾನಕ್ಕೂ ಅವಕಾಶ ಮಾಡಿಕೊಡಬೇಕಿದೆ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಒತ್ತಾಯಿಸಿದೆ.
ಇಲ್ಲಿನ ನಿವಾಸಿಗಳ ಧಾರ್ಮಿಕ ಭಾವನೆಗೆ ಬೆಲೆಕೊಟ್ಟು ಕೊರೊನಾ ಸಮಯವಾಗಿರುವ ಕಾರಣ ಭಾಗಮಂಡಲದಲ್ಲಿ ಪಿಂಡ ಪ್ರದಾನ ಮಾಡಿದವರಿಗೆ ಮಾತ್ರ ತಲಕಾವೇರಿಯ ತೀರ್ಥ ಕುಂಡಿಕೆಯ ಸಮೀಪದ ಕೊಳದಲ್ಲಿ ತೀರ್ಥಸ್ನಾನಕ್ಕೂ ಅವಕಾಶ ಮಾಡಿಕೊಡಬೇಕಿದೆ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಒತ್ತಾಯಿಸಿದೆ.