ಶನಿವಾರಸಂತೆ, ಜ. ೭: ಇಲ್ಲಿನ ಗ್ರಾಮ ಪಂಚಾಯಿತಿ ಮಾಸಿಕ ಸಾಮಾನ್ಯ ಸಭೆ ಅಧ್ಯಕ್ಷೆ ಸರೋಜಾ ಶೇಖರ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಸಾರ್ವಜನಿಕರಿಂದ ಬಂದ ಅರ್ಜಿಗಳು, ಅಭಿವೃದ್ಧಿ ಕಾಮಗಾರಿಗಳು, ವರ್ಷಾರಂಭದಲ್ಲೆ ಬಜೆಟ್ ತಯಾರಿಕೆ, ಕಸ ವಿಲೇವಾರಿ, ವಿದ್ಯುತ್ ದೀಪ ಅಳವಡಿಕೆ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಂಭೀರ ಚರ್ಚೆ ನಡೆದವು.

ಪಂಚಾಯಿತಿಯಲ್ಲಿ ಸೋರಿಕೆ ತಡೆಗಟ್ಟಲು ಪ್ರತಿ ವರ್ಷಾರಂಭದಲ್ಲೇ ಬಜೆಟ್ ಮಂಡಿಸಬೇಕು. ಗ್ರಂಥಾಲಯಕ್ಕೆ ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಓದುಗ ಗ್ರಾಹಕರ ಸಂಖ್ಯೆ ಹೆಚ್ಚಿಸುವಂತೆ ಉತ್ತಮ ಪುಸ್ತಕಗಳನ್ನು ತರಿಸಿ ಅಭಿವೃದ್ಧಿಪಡಿಸಬೇಕು ಎಂದು ಪಂಚಾಯಿತಿ ಸದಸ್ಯ ಎಸ್.ಎನ್. ರಘ, ಶರತ್ ಶೇಖರ್ ಹಾಗೂ ಆದಿತ್ಯಗೌಡ ಸಲಹೆ ನೀಡಿದರು.

ಇನ್ನೋರ್ವ ಸದಸ್ಯ ಸರ್ದಾರ್ ಅಹಮ್ಮದ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ೩ ವಿಭಾಗಗಳ ಅಭಿವೃದ್ಧಿ ಕಾಮಗಾರಿ ಆ ವಿಭಾಗದ ಸದಸ್ಯರಿಗೆ ಮಾತ್ರವಲ್ಲದೆ ಪ್ರತಿ ಸದಸ್ಯರಿಗೂ ಅನ್ವಯಿಸುತ್ತದೆ. ಪ್ರತಿಯೊಬ್ಬರು ಪಂಚಾಯಿತಿ ಅಭಿವೃದ್ಧಿಗೆ ಸ್ಪಂದಿಸಿ ಶ್ರಮಿಸಬೇಕು ಎಂದರು.

ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ನೂತನ ವೃತ್ತ ನಿರ್ಮಿಸಿ ರಾಣಿ ಚೆನ್ನಮ್ಮ ಪ್ರತಿಮೆ ನಿರ್ಮಿಸುವಂತೆ ಉಪಾಧ್ಯಕ್ಷ ಎಸ್.ಆರ್. ಮಧು ಆಗ್ರಹಿಸಿದಾಗ, ಉಳಿದ ಸದಸ್ಯರೂ ಶೀಘ್ರ ನಿರ್ಮಾಣ ಮಾಡಲು ಸಮ್ಮತಿಸಿದರು. ವೃತ್ತದಲ್ಲೇ ನೂತನ ಆಟೋ ನಿಲ್ದಾಣ, ಸಮಾರಂಭ ವೇದಿಕೆ, ವಿಶ್ರಾಂತಿ ಗೃಹ ನಿರ್ಮಾಣ ಮಾಡು ವಂತೆಯೂ ತೀರ್ಮಾನಿಸಲಾಯಿತು.

ಪಂಚಾಯಿತಿ ನೂತನ ಕಚೇರಿ ನಿರ್ಮಾಣದ ಬಗ್ಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರನ್ನು ಭೇಟಿಯಾಗುವಂತೆಯೂ ಸಭೆಯಲ್ಲಿ ಒಮ್ಮತದ ನಿರ್ಧಾರ ಮಾಡಲಾಯಿತು. ರೈತ ಸಂಪರ್ಕ ಕೇಂದ್ರ ಕಟ್ಟಡ ನಿರ್ಮಾಣ ಅವೈಜ್ಞಾನಿಕವಾಗಿದ್ದು, ದುರಸ್ತಿ ಕಾಮಗಾರಿ ಆರಂಭಿಸಲು ಹಾಗೂ ಪಂಚಾಯಿತಿ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ಕ್ರಿಯಾ ಯೋಜನೆಗೆ ಒಳಪಡಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಕಾವಲುಗಾರರ ಕೊಠಡಿ, ಸೌದೆ ಕೊಠಡಿ, ಶೌಚಾಲಯ ನಿರ್ಮಾಣ, ವಿದ್ಯುತ್ ಸಂಪರ್ಕ ಕೋರಿ ಬಂದ ಅರ್ಜಿಗೆ ಸ್ಪಂದಿಸಿದ ಸದಸ್ಯರು ಸ್ಥಳ ಪರಿಶೀಲನೆ ಮಾಡಲು ನಿರ್ಧರಿಸಿದರು. ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಳೆ ನೀರು ಕೊಯ್ಲು ನಿರ್ಮಾಣ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದರ ಜತೆಗೆ ಮಹಿಳಾ ಸಹಕಾರ ಸಮಾಜದ ಆವರಣದಲ್ಲಿರುವ ಸರಕಾರದ ಕೊಳವೆ ಬಾವಿ ವಶಪಡಿಸಿಕೊಳ್ಳಲೂ ತೀರ್ಮಾನಿಸಲಾಯಿತು.

ಗುಂಡೂರಾವ್ ಬಡಾವಣೆಯಲ್ಲಿ ಡೆಂಗ್ಯೂ, ಮಲೇರಿಯಾ ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆಯ ಗಮನಕ್ಕೆ ತರುವಂತೆ, ಅಲ್ಲಿರುವ ಕೆರೆ ದುರಸ್ತಿಪಡಿಸುವಂತೆ ಸದಸ್ಯರಾದ ಸರ್ದಾರ್, ರಘು, ಆದಿತ್ಯ ಸೂಚಿಸಿದರು. ಉದ್ಯೋಗ ಖಾತ್ರಿ ಯೋಜನೆಗೆ ಸಾರ್ವಜನಿಕರ ಸಹಕಾರ ಕೋರಿದ ಸಭೆಯಲ್ಲಿ ಶ್ರೀ ಚಾಮುಂಡೇಶ್ವರಿ ಬನದ ಅಭಿವೃದ್ಧಿ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಲು ತೀರ್ಮಾನಿಸಿತು.

ಪಂಚಾಯಿತಿ ಉಪಾಧ್ಯಕ್ಷ ಎಸ್.ಆರ್. ಮಧು,ಸದಸ್ಯರಾದ ಎಸ್.ಸಿ. ಶರತ್ ಶೇಖರ್, ಎಸ್.ಎನ್. ರಘು, ಆದಿತ್ಯಗೌಡ, ಸರ್ದಾರ್ ಅಹಮ್ಮದ್, ಗೀತಾಹರೀಶ್, ಸರಸ್ವತಿ, ಕಾವೇರಿ, ಫರ್ಜಾನಾ, ಪಿಡಿಓ ಬಿ.ಜೆ. ಮೇದಪ್ಪ, ಕಾರ್ಯದರ್ಶಿ ತಮ್ಮಯ್ಯಾಚಾರಿ, ಬಿಲ್ ಸಂಗ್ರಾಹಕ ವಸಂತ್ ಕುಮಾರ್, ಸಿಬ್ಬಂದಿ ಫೌಜಿಯಾ, ಲೀಲಾ, ಧರ್ಮಪ್ಪ ಉಪಸ್ಥಿತರಿದ್ದರು.