*ಗೋಣಿಕೊಪ್ಪ, ಜ. ೮: ಗೋಣಿಕೊಪ್ಪ-ಮೈಸೂರು ರಾಜ್ಯ ಹೆದ್ದಾರಿಯ ರಸ್ತೆ ಡಾಂಬರೀಕರಣ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಗೋಣಿಕೊಪ್ಪದ ರಾಜ್ಯ ಹೆದ್ದಾರಿಯ ೯ ಕಿ.ಮೀ. ವ್ಯಾಪ್ತಿಯ ರಸ್ತೆ ಡಾಂಬರೀಕರಣಕ್ಕೆ ಈ ಹಿಂದೆಯೇ ಚಾಲನೆ ನೀಡಲಾಗಿದ್ದು, ಮೊದಲ ಹಂತದಲ್ಲಿ ೭.೫ ಕಿ.ಮೀ. ರಸ್ತೆ ಡಾಂಬರೀಕರಣ ಪೂರ್ಣಗೊಂಡಿತ್ತು.
ರೂ. ೧ ಕೋಟಿ ೪೦ ಲಕ್ಷ ಅನುದಾನದಲ್ಲಿ ನಡೆಯುತ್ತಿರುವ ಮೈಸೂರು-ಗೋಣಿಕೊಪ್ಪ ರಾಜ್ಯ ಹೆದ್ದಾರಿ ಕಾಮಗಾರಿಯಲ್ಲಿ ಮಳೆಯ ನೆಪದಿಂದ ತಿತಿಮತಿ ವ್ಯಾಪ್ತಿಯ ಬಾಳುಮನಿ ಸೇತುವೆಯಿಂದ ೧.೫ ಕಿ.ಮೀ. ವ್ಯಾಪ್ತಿಯ ರಸ್ತೆ ಡಾಂಬರೀಕರಣ ಸ್ಥಗಿತಗೊಳಿಸಲಾಗಿತ್ತು. ಕಾಮಗಾರಿಯನ್ನು ಮರು ಪ್ರಾರಂಭಿಸುವAತೆ ಆಗ್ರಹ ಕೇಳಿ ಬಂದ ಹಿನ್ನೆಲೆ ಗುತ್ತಿಗೆದಾರ ಕಾಮಗಾರಿ ಕೈಗೆತ್ತಿಕೊಂಡು ಡಾಂಬರೀಕರಣ ಪ್ರಾರಂಭಕ್ಕೆ ಮುಂದಾಗಿ ಮೊದಲ ಹಂತದಲ್ಲಿ ಗುಂಡಿ ಮುಚ್ಚುವ ಕಾರ್ಯ ನಡೆಸಿದರು. ಆದರೆ, ಗುಂಡಿ ಮುಚ್ಚುವ ಕಾರ್ಯದಲ್ಲಿ ಗುಣಮಟ್ಟ ಕಾಯ್ದುಕೊಳ್ಳದೆ ಕಾಟಾಚಾರಕ್ಕೆ ಕಾಮಗಾರಿ ಪ್ರಾರಂಭಿಸಿರುವುದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು. ಸ್ಥಳೀಯ ಪಂಚಾಯಿತಿ ಸದಸ್ಯ ಅನೂಪ್ ಕುಮಾರ್ ಹಾಗೂ ಶಕ್ತಿ ಕೇಂದ್ರ ಸಹಪ್ರಮುಖ್ ಗೋವಿಂದ್, ರಂಜಿತ್, ಸತೀಶ್ ಮತ್ತು ಇತರರು ಗುಣಮಟ್ಟದ ಕಾಮಗಾರಿಯನ್ನು ನಡೆಸಬೇಕೆಂದು ಗುತ್ತಿಗೆದಾರರ ಬಳಿ ಒತ್ತಾಯಿಸಿದರು. ಇಲ್ಲವಾದಲ್ಲಿ ರಸ್ತೆಯಲ್ಲಿ ಕುಳಿತು ಸಾರ್ವಜನಿಕರೊಂದಿಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.