ಮಡಿಕೇರಿ, ಜ. ೭: ಕೊರೊನಾ ತಡೆಗೆ ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು, ಇದರ ಭಾಗವಾಗಿ ವೀಕೆಂಡ್ ಕರ್ಫ್ಯೂ ಘೋಷಿಸಿದೆ. ಇದು ಜನರ ಗೊಂದಲಕ್ಕೆ ಕಾರಣವಾಗಿದ್ದು, ಈ ಬಗ್ಗೆ ಕೊಡಗು ಜಿಲ್ಲಾಧಿಕಾರಿ ಬಿ.ಸಿ. ಸತೀಶ ಅವರು ಸ್ಪಷ್ಟನೆ ನೀಡಿದ್ದಾರೆ.
ಸರಕಾರದ ನಿಯಮದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಜಿಲ್ಲಾಡಳಿತ ಯಾವುದೇ ರೀತಿಯ ಪ್ರತ್ಯೇಕ ನಿಯಮ ರೂಪಿಸಿಲ್ಲ. ಅಗತ್ಯ ವಸ್ತುಗಳ ಮಾರಾಟ ಇರಲಿದೆ. ಜನರು ಅಗತ್ಯವಿದ್ದರೆ ಮಾತ್ರ ಹೊರಬಂದು ಅಗತ್ಯ ವಸ್ತು ಖರೀದಿಸಿ. ವಿನಾಕಾರಣ ಸಂಚರಿಸಬೇಡಿ ಎಂದು ‘ಶಕ್ತಿ’ ಮೂಲಕ ಮನವಿ ಮಾಡಿದ್ದಾರೆ.
ಅಗತ್ಯ ವಸ್ತು ಖರೀದಿಗೆ ಸಮಯದ ಮಿತಿಯ ಬಗ್ಗೆ ಮೂಡಿರುವ ಗೊಂದಲಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಸತೀಶ ಅವರು, ಈ ಹಿಂದೆ ಕರ್ಫ್ಯೂ ಸಮಯದಲ್ಲಿ ಸರಕಾರ ಸಮಯದ ಮಿತಿ ಹೇಳಿತ್ತು. ಆದರೆ, ಈ ಬಾರಿ ಮಾರ್ಗಸೂಚಿಯಲ್ಲಿ ಈ ಬಗ್ಗೆ ಉಲ್ಲೇಖವಿಲ್ಲ. ಹಾಗಾಗಿ ಅಗತ್ಯ ವಸ್ತು ಮಾರಾಟಕ್ಕೆ ಪೂರ್ಣ ದಿನ ಅವಕಾಶ ನೀಡಲಾಗಿದೆ. ಜನರು ಇದನ್ನು ಲಾಭ ಮಾಡಿಕೊಂಡು ಅನಗತ್ಯವಾಗಿ ಸಂಚರಿಸಬೇಡಿ. ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ ಎಂದು ಕೋರಿದ್ದಾರೆ.