ಗೋಣಿಕೊಪ್ಪಲು, ಜ. ೮: ಹೊಸ ವರ್ಷ ಆರಂಭವಾಗಿ ಕೇವಲ ಎಂಟೇ ದಿನಗಳು ಕಳೆದಿವೆಯಾದರೂ ಈಗಾಗಲೇ ಜಿಲ್ಲೆಯಲ್ಲಿ ೬ ಹಸುಗಳು ಹುಲಿ, ಚಿರತೆ ದಾಳಿಗೆ ಬಲಿಯಾಗಿವೆ. ದಕ್ಷಿಣ ಕೊಡಗಿನ ಬೆಳ್ಳೂರಿನಲ್ಲಿ ೨, ಹುದಿಕೇರಿಯಲ್ಲಿ ೧, ತೂಚಮಕೇರಿಯಲ್ಲಿ ೨ ಹಸುಗಳು ಹುಲಿ ದಾಳಿಗೆ ಬಲಿಯಾಗಿದ್ದರೆ, ಕೂಡಿಗೆ ಸಮೀಪದ ತೊರೆನೂರು ಬಳಿ ಚಿರತೆ ದಾಳಿಗೆ ಹಸುವೊಂದು ಬಲಿಯಾಗಿದೆ.
ದಕ್ಷಿಣ ಕೊಡಗಿನ ತೂಚಮಕೇರಿ ಗ್ರಾಮದ ಪುಟ್ಟಂಗಡ ಚೇತನ್ ಅವರಿಗೆ ಸೇರಿದ ಗಬ್ಬದ ಹಸುವನ್ನು ಕೊಂದು ಹಾಕಿದೆ.
ಶನಿವಾರ ಮಧ್ಯರಾತ್ರಿ ೧.೩೦ ಸುಮಾರಿಗೆ ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆ ದಾಳಿ ನಡೆಸಿದ ಹುಲಿಯು ಹಸುವನ್ನು ಹುಲಿಯೊಂದು ಕೊಂದು ಅನತಿ ದೂರದ ವರೆಗೂ ಎಳೆದೊಯ್ದು ನಂತರ ಹಸುವಿನ ಸ್ವಲ್ಪ ಭಾಗವನ್ನು ತಿಂದು ಬಿಟ್ಟಿದೆ.
ಮುಂಜಾನೆಯ ವೇಳೆ ಎಂದಿನAತೆ ಮನೆಯ ಸಮೀಪ ವಿರುವ ಕೊಟ್ಟಿಗೆ ಬಳಿ ಹಸುವಿನ ಮಾಲೀಕರು ಬಂದು ನೋಡಿದ ಸಂದರ್ಭ ಹಸು ಮೃತಪಟ್ಟಿರುವುದು ಗೊತ್ತಾಗಿದೆ. ಸುತ್ತಮುತ್ತಲಿನ ಜನರಿಗೆ ಸುದ್ದಿ ಮುಟ್ಟಿಸಿದ ನಂತರ ಅರಣ್ಯ ಇಲಾಖೆಯ ಪೊನ್ನಂಪೇಟೆ ವಲಯ ಅರಣ್ಯಧಿಕಾರಿ ರಾಜಪ್ಪ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಈ ವೇಳೆ ಗ್ರಾಮಸ್ಥರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಹುಲಿಯನ್ನು ಸೆರೆ ಹಿಡಿಯಲು ಒತ್ತಾಯಿಸಿದರು. ಕಳೆದ ಮೂರು ದಿನಗಳಿಂದ ಹುಲಿಯು ದಿನಕ್ಕೊಂದು ಹಸುವನ್ನು ಸಾಯಿಸಿ, ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದೆ. ಅಲ್ಲದೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಡಗಿಕೊಂಡು ರಾತ್ರಿಯ ವೇಳೆ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿ, ಕಳೆದ ನಾಲ್ಕು ದಿನಗಳ ಹಿಂದೆ ಕರ್ನಾಟಕ ರಾಜ್ಯ ರೈತ ಸಂಘದ
(ಮೊದಲ ಪುಟದಿಂದ) ಪದಾಧಿಕಾರಿಗಳು ಹುದಿಕೇರಿ ಹೋಬಳಿಯ ಕೋಣಗೇರಿಯಲ್ಲಿ ಪ್ರತಿಭಟನೆ ನಡೆಸಿ ಹಿರಿಯ ಅಧಿಕಾರಿಗಳು ಕೂಡಲೇ ಕ್ರಮ ವಹಿಸುವಂತೆ ಒತ್ತಾಯ ಹೇರಿದ್ದರು.
ಸ್ಥಳಕ್ಕೆ ಆಗಮಿಸಿದ್ದ ತಿತಿಮತಿ ವಲಯದ ಎ.ಸಿ.ಎಫ್. ಉತ್ತಪ್ಪ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಹುಲಿ ಸೆರೆಗೆ ಇಲ್ಲಿಯ ತನಕ ಯಾವುದೇ ಕಾರ್ಯಾಚರಣೆ ನಡೆದಿಲ್ಲ ಎಂದು ಗ್ರಾಮಸ್ಥರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿರಂತರ ಹುಲಿ ದಾಳಿಯಿಂದ ಗ್ರಾಮದ ಜನರು ಗಾಬರಿಗೊಂಡಿದ್ದಾರೆ.
ದಿನಂಪ್ರತಿ ಹುಲಿ ದಾಳಿಯಿಂದ ಹಸುಗಳು ಸಾವನ್ನಪ್ಪುತ್ತಿವೆ, ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರ ಹಸುಗಳು ಹುಲಿಯ ಬಾಯಿಗೆ ಆಹಾರವಾಗುತ್ತಿದೆ ಎಂದು ರೈತ ಸಂಘ ಹುದಿಕೇರಿ ಹೋಬಳಿ ಅಧ್ಯಕ್ಷ ಚಂಗುಲAಡ ಸೂರಜ್ ಹಾಗೂ ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.