ಮಡಿಕೇರಿ, ಜ. ೮: ಕಷ್ಟಪಟ್ಟು ಕಟ್ಟಿದ್ದ ಮನೆಯೊಳಗಡೆ ನಿಧಿ ಇದೆ ಎಂಬ ಉಸ್ತಾದರೋರ್ವರ ಮಾತಿಗೆ ಮರುಳಾಗಿ ಮನೆಯೊಡೆಯನೇ ತನ್ನ ಮನೆಯೊಳಗಡೆ ಹೊಂಡ ತೋಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ವೀರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ಪೈಸಾರಿ ನಿವಾಸಿ ಗಣೇಶ್ ಎಂಬವರ ಮನೆಯೊಳಗಡೆ ನಿಧಿ ಇರುವುದಾಗಿ ಯಾರೋ ಉಸ್ತಾದರೋರ್ವರು ಹೇಳಿದ್ದರಂತೆ. ಅವರ ಮಾತು ಕೇಳಿ ಗಣೇಶ್ ತನ್ನ ಮನೆಯೊಳಗಡೆ ಹೊಂಡ ತೋಡಿ ನಿಧಿಗಾಗಿ ಹುಡುಕಾಡಿದ್ದಾರೆ.
ಗುಂಡಿ ತೋಡಿದ ಮಣ್ಣನ್ನು ಮನೆಯ ಬೇರೆ ಕೋಣೆಗಳಲ್ಲಿ ಸಂಗ್ರಹಿಸಿದ್ದಾರೆ. ಈ ಬಗ್ಗೆ ಸುಳಿವರಿತ ಕೊಡಗು ಜಿಲ್ಲಾ ಅಪರಾಧ ಪತ್ತೆದಳದವರು ಇಂದು ಮನೆಗೆ ದಾಳಿ ಮಾಡಿದ್ದಾರೆ. ಈ ಸಂದರ್ಭ ನಿಧಿಗಾಗಿ ಹೊಂಡ ತೋಡಿರುವುದು ಪತ್ತೆಯಾಗಿದೆ.
ಈ ಸಂಬAಧ ಗಣೇಶ್ ಹಾಗೂ ಮಂಗಳೂರು ಮೂಲದ ಸಾದಿಕ್ ಎಂಬಿಬ್ಬರನ್ನು ವಿಚಾರಣೆಗೆ ಒಳಪಡಿಸಿರುವುದಾಗಿ ತಿಳಿದು ಬಂದಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.
?ಸಂತೋಷ್