ಮಡಿಕೇರಿ, ಜ. ೬: ಕೋವಿಡ್ ರೂಪಾಂತರಿ ವೈರಸ್ ವ್ಯಾಪಿಸುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಹೊರಗಿನಿಂದ ಬರುವ ವ್ಯಾಪಾರಸ್ಥರಿಗೆ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಬಾರದೆಂದು ಮಡಿಕೇರಿ ಮಾರ್ಕೆಟ್ ಸಂತೆ ವ್ಯಾಪಾರಿಗಳ ಹಿತರಕ್ಷಣಾ ಸಮಿತಿ ಮನವಿ ಮಾಡಿದೆ. ನಗರಸಭೆ ಉಪಾಧ್ಯಕ್ಷೆ ಸವಿತಾ ರಾಕೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಸಮಿತಿಯ ಪ್ರಮುಖರು, ಈಗಾಗಲೇ ಕೋವಿಡ್‌ನಿಂದ ಸಾವು, ನೋವುಗಳು ಸಂಭವಿಸಿವೆ. ಇದೀಗ ಮತ್ತೆ ಸೋಂಕು ವ್ಯಾಪಿಸುತ್ತಿದ್ದು, ಲಾಕ್‌ಡೌನ್ ಆಗುವ ಸಾಧ್ಯತೆಗಳಿವೆ. ಸ್ಥಳೀಯ ವ್ಯಾಪಾರಿಗಳ ಹಿತದೃಷ್ಟಿಯಿಂದ ಹೊರಗಿನಿಂದ ಬರುವ ವ್ಯಾಪಾರಸ್ಥರಿಗೆ ನಿರ್ಬಂಧ ಹೇರಬೇಕೆಂದು ಒತ್ತಾಯಿಸಿದರು.
ವಾಹನ ದಟ್ಟಣೆ ನಿಯಂತ್ರಿಸಿ : ನಗರದ ಮಾರುಕಟ್ಟೆಯ ಮುಂಭಾಗ ಶುಕ್ರವಾರದ ಸಂತೆ ದಿನ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಗ್ರಾಹಕರ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಸಂತೆ ದಿನದಂದು ಮಾರುಕಟ್ಟೆ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ನೀಡಬಾರದು. ನಗರಸಭೆ ಹಾಗೂ ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಎ. ರಜಾಕ್ ಮನವಿ ಮಾಡಿದರು.
ಸಮಿತಿಯ ಅಧ್ಯಕ್ಷ ಎಂ.ಎA. ಇಸ್ಮಾಯಿಲ್, ಸದಸ್ಯರುಗಳಾದ ಎಂ.ಬಿ. ಷರೀಫ್, ಎಂ.ಎ. ರಜಾಕ್, ಹನೀಫ್ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.