ವೀರಾಜಪೇಟೆ, ಜ. ೬: ನಗರದ ಜೂನಿಯರ್ ಕಾಲೇಜು ಬಳಿ ನಿರ್ಮಾಣಗೊಳ್ಳುತ್ತಿರುವ ಒಟ್ಟು ರೂ. ೩.೯೧ ಕೋಟಿ ವೆಚ್ಚದ ಒಳಾಂಗಣ ಕ್ರೀಡಾಂಗಣ ಕಾಮಗಾರಿ ವಿಳಂಬ ಮಾಡಿದರೆ ಕಪ್ಪುಪಟ್ಟಿಗೆ ಸೇರಿಸುವ ಎಚ್ಚರಿಕೆಯನ್ನು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ನೀಡಿದರಲ್ಲದೆ, ತ್ವರಿತವಾಗಿ ಕೆಲಸ ಮುಗಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಕಳೆದ ೯ ವರ್ಷದಿಂದ ಅಪೂರ್ಣ ಸ್ಥಿತಿಯಲ್ಲಿರುವ ಒಳಾಂಗಣ ಕ್ರೀಡಾಂಗಣಕ್ಕೆ ಭೇಟಿ ನೀಡಿ ಸ್ಥಳದಿಂದಲೇ ಗುತ್ತಿಗೆದಾರ ರಂಗರಾಜು ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ೨೦೧೩ ರಲ್ಲಿ ಕಾಮಗಾರಿ ಆರಂಭಿಸಿ ಬಳಿಕ ಇಲ್ಲಿಯವರೆಗೆ ಆದ ಕಾಮಗಾರಿಯನ್ನು ಪರಿಶೀಲನೆ ನಡೆಸಲಿಲ್ಲ. ಕಾಮಗಾರಿ ಗುಣಮಟ್ಟ ಕಳಪೆಯಾಗಿದೆ. ಈಗಾಗಲೇ ಬಾಗಿಲು ಗೆದ್ದಲು ಹಿಡಿಯುತ್ತಿದೆ, ಶೌಚಾಲಯ ಕೆಲಸ ಸಮರ್ಪಕವಾಗಿಲ್ಲ. ಟೆನ್ನಿಸ್ ಕೋರ್ಟ್ಗೆ ಹಾಕಿರುವ ಮರಗಳ ಕೆಲಸ ಕಳಪೆಯಾಗಿದೆ. ವಿದ್ಯುತ್ ಸಂರ್ಪಕದ ವ್ಯವಸ್ಥೆ ಆಗಿಲ್ಲ, ಹೊರ ಭಾಗಕ್ಕೆ ಇನ್ನು ಸುಣ್ಣಬಣ್ಣ ಬಳಿದಿಲ್ಲ. ಕ್ರೀಡಾಪ್ರೇಮಿಗಳಿಗೆ ಕ್ರೀಡಾಂಗಣ ಇದ್ದು ಇಲ್ಲಂದತಾಗಿದೆ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಉತ್ತರಿಸಿದ ಗುತ್ತಿಗೆದಾರ ರೂ. ೩ ಕೋಟಿ ಹಣ ಬಂದಿದೆ. ಕಾಮಗಾರಿ ಪೂರ್ಣಗೊಳಿಸಲು ಹೆಚ್ಚುವರಿ ರೂ. ೯೧ ಲಕ್ಷ ಬಿಡುಗಡೆಯಾಗಿದ್ದು ಅದರ ಯೋಜನಾ ವರದಿ ಸಿಕ್ಕಿಲ್ಲ ಎಂದು ಉತ್ತರಿಸಿದರು. ಈಗಾಗಲೇ ಕಾಲ ಉರುಳಿದೆ. ಶೀಘ್ರದಲ್ಲಿಯೇ ಕೆಲಸ ಮಾಡಿ ಇಲ್ಲವಾದರೆ ಹಣ ಬಿಡುಗಡೆ ಮಾಡುವುದಿಲ್ಲ ಎಂದು ಬೋಪಯ್ಯ ಎಚ್ಚರಿಕೆ ನೀಡಿದರು.

ಇದೇ ಸಂದರ್ಭ ಯುವಜನ ಮತ್ತು ಕ್ರೀಡಾ ಇಲಾಖೆಯ ಅಭಿಯಂತರ ಹರೀಶ್ ಹಾಗೂ ಜಂಟಿ ನಿರ್ದೇಶಕ ಅವರಿಗೆ ಕರೆ ಮಾಡಿ ಹೊರ ಭಾಗದ ಮೇಲ್ಛಾವಣಿ ಸರಿಯಾಗಿ ಅಳವಡಿಸದ ಹಿನ್ನೆಲೆ ಕಾಲಾಂತರದಲ್ಲಿ ಮಳೆಗೆ ಗೋಡೆ ಶಿಥಿಲವಾಗಲಿದೆ. ಕಾಮಗಾರಿ ಸಂಪೂರ್ಣ ಕಳಪೆ ಆಗಿರುವುದರಿಂದ ತಕ್ಷಣ ಲೋಪ ದೋಷಗಳನ್ನು ಸರಿಪಡಿಸಬೇಕು. ಟೆನ್ನಿಸ್ ಕ್ರೀಡಾಂಗಣದ ಮರದ ಹಾಸನ್ನು ಸೂಕ್ತ ರೀತಿಯಲ್ಲಿ ಮರು ಅಳವಡಿಕೆ ಮಾಡಬೇಕು. ಕಾಮಗಾರಿಯನ್ನು ಕಾಲ ಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿದರು.

ಒಲಂಪಿಯನ್ ಕೂತಂಡ ಪೂಣಚ್ಚ ಮಾತನಾಡಿ, ಕಾವಲುಗಾರನ ನಿರ್ಲಕ್ಷö್ಯದಿಂದ ಪ್ರತಿದಿನ ಸುತ್ತಮುತ್ತಲಿನ ಜನರು ಬಂದು ಆಟವಾಡುತ್ತಿದ್ದಾರೆ. ಕಾಮಗಾರಿ ಪೂರ್ಣಗೊಳ್ಳುವ ತನಕ ಆಟಕ್ಕೆ ಅವಕಾಶ ನೀಡಬೇಡಿ ಎಂದು ಶಾಸಕರಿಗೆ ದೂರು ನೀಡಿದಾಗ ಶಾಸಕರು ಯುವಜನ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಗುರುಸ್ವಾಮಿಯವರನ್ನು ತರಾಟೆಗೆ ತೆಗೆದುಕೊಂಡರು. ಕ್ರೀಡಾ ಅಧಿಕಾರಿ ಖಾಸಗಿ ವ್ಯಕ್ತಿಗಳು ಆಟವಾಡುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದು ಶಾಸಕರಿಗೆ ಹೇಳಿದಾಗ ಅಸಮಾಧಾನಗೊಂಡ ಶಾಸಕರು ಕಾಮಗಾರಿ ಪೂರ್ಣಗೊಳ್ಳದೆ ಹೇಗೆ ಆಟವಾಡಲು ಬಿಟ್ಟಿದ್ದೀರ. ಕಾವಲುಗಾರರನ್ನು ತಕ್ಷಣ ಬದಲಾಯಿಸಿ ಎಂದು ಸೂಚನೆ ನೀಡಿದರು

ಇದೇ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಸ್ಮೀತಾ, ಮುಖ್ಯಾಧಿಕಾರಿ ಚಂದ್ರಕುಮಾರ್, ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷೆ ಜೂನ, ಅಭಿಯಂತರ ಹೇಮಂತ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಣಪತಿ, ಪ್ರಾಂಶುಪಾಲೆ ತಾತಂಡ ಜ್ಯೋತಿ ಮುಂತಾದವರು ಉಪಸ್ಥಿತರಿದ್ದರು.