ಮಡಿಕೇರಿ ಜ. ೬: ಕೊಡಗಿನ ಸ್ಥಳೀಯ ಸಂಸ್ಥೆಗಳ ಮೂಲಕ ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿ ಚುನಾಯಿತರಾಗಿರುವ ಮಂಡೇಪAಡ ಸುಜಾ ಕುಶಾಲಪ್ಪ ಅವರು ಇಂದು ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅಧಿಕೃತವಾಗಿ ಅಧಿಕಾರಕ್ಕೆ ಬಂದಿದ್ದಾರೆ. ವಿಧಾನಸಭೆಯ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಸುಜಾಕುಶಾಲಪ್ಪ ಅವರು ಪ್ರಮಾಣವಚನ ಸ್ವೀಕರಿಸಿದರು. ಇವರು ಕೊಡಗಿನ ದೇವಾನುದೇವತೆಗಳಾದ ಶ್ರೀ ಇಗ್ಗುತ್ತಪ್ಪ, ಕಾವೇರಿ ಮಾತೆ, ಗ್ರಾಮದೇವರಾದ ಚೆಂಬೆಬೆಳ್ಳೂರು ಭದ್ರಕಾಳಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕೊಡವ ಸಾಂಪ್ರದಾಯಿಕ ಧಿರಿಸಾದ ಕುಪ್ಯಚೇಲೆಯೊಂದಿಗೆ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಇವರು ವಿಶೇಷವಾಗಿ ಗಮನ ಸೆಳೆದರು.
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಉಪಸ್ಥಿತರಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಮಾಣವಚನ ಭೋದಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ಸಿಂಹ, ಶಾಸಕ ಅಪ್ಪಚ್ಚು ರಂಜನ್, ನಿರ್ಗಮಿತ ಎಂ.ಎಲ್.ಸಿ. ಸುನಿಲ್ ಸುಬ್ರಮಣಿ, ಬಿಜೆಪಿ ಜಿಲ್ಲಾಧ್ಯಕ್ಷ
(ಮೊದಲ ಪುಟದಿಂದ) ರಾಬಿನ್ ದೇವಯ್ಯ, ಪ್ರಮುಖರಾದ ಮನುಮುತ್ತಪ್ಪ, ಬಿ.ಬಿ. ಭಾರತೀಶ್, ನೆಲ್ಲೀರ ಚಲನ್, ರತ್ನಾಕರ ಶೆಟ್ಟಿ, ಜೋಕಿಂ, ಅರುಣ್ ಭೀಮಯ್ಯ, ಬಾಂಡ್ ಗಣಪತಿ, ಕಾಂತಿ ಸತೀಶ್, ಸುವಿನ್ ಗಣಪತಿ, ಕಿಲನ್ ಗಣಪತಿ, ರಘು ನಾಣಯ್ಯ, ಚೆಪ್ಪುಡಿರ ಮಾಚಯ್ಯ ಸೇರಿದಂತೆ ಸುಜಾ ಕುಶಾಲಪ್ಪ ಸಂಸಾರ ಹಾಗೂ ಇತರರು ಭಾಗಿಗಳಾಗಿದ್ದರು.