ಮಡಿಕೇರಿ, ಜ. ೭: ಇತ್ತೀಚೆಗೆ ನಿಧನರಾದ ಚತುರ್ಭಾಷಾ ಸಾಹಿತಿ ಮುಲ್ಲೇಂಗಡ ಬೇಬಿ ಚೋಂದಮ್ಮ ನವರಿಗೆ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ಬಳಗ, ತೂಕ್‌ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿ, ತೂಕ್‌ಬೊಳಕ್ ಕೊಡವ ವಾರಪತ್ರಿಕೆ, ಹಿರಿಯ ನಾಗರಿಕರ ವೇದಿಕೆ ವತಿಯಿಂದ ಶ್ರದ್ಧಾಂಜಲಿ ಸಭೆ ವೀರಾಜಪೇಟೆಯ ಮಹಿಳಾ ಸಮಾಜದಲ್ಲಿ ನಡೆಯಿತು.
ನಾಲ್ಕು ಸಂಸ್ಥೆಯ ಅಧ್ಯಕ್ಷರಾದ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಾವಿನಲ್ಲೂ ಸಾರ್ಥಕತೆ ಮೆರೆದ ಬೇಬಿ ಅವರಿಗೆ ನುಡಿನಮನ ಸಲ್ಲಿಸಲಾಯಿತು. ದೇಹ ಹಾಗೂ ನೇತ್ರದಾನದ ಮೂಲಕ ಸಾವಿನ ನಂತರವೂ ಬೇಬಿ ಚೋಂದಮ್ಮ ಜೀವಂತವಾಗಿದ್ದಾರೆ.
ನಾಲ್ಕು ಭಾಷೆಯ ಪ್ರವೀಣೆಯಾಗಿ ಕೊಡವ ಜನಾಂಗದಲ್ಲಿ ಕನ್ನಡ ಪಂಡಿತ ಪದವಿಯನ್ನು ಪಡೆದ ಪ್ರಥಮ ಮಹಿಳೆ. ಇವರ ಸಮಾಜಮುಖಿ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಮಾತನಾಡಿದವರು ನೆನೆದರು.
ಹಿರಿಯರಾದ ನಾಯಡ ವಾಸು ನಂಜಪ್ಪ, ಪಾರುವಂಗಡ ಸನ್ನಿ ಮೊಣ್ಣಪ್ಪ, ಕಾಳಿಮಾಡ ಡಾ. ಶಿವಪ್ಪ, ಕಾಟಿಮಾಡ ಡಿಕ್ಕಿ ಅಣ್ಣಯ್ಯ, ಪುಲಿಯಂಡ ಪಿ. ಪೊನ್ನಪ್ಪ, ಪುಟ್ಟಿಚಂಡ ಅಯ್ಯಣ್ಣ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೇಶವ ಕಾಮತ್, ರಾಷ್ಟçಪ್ರಶಸ್ತಿ ವಿಜೇತ ಶಿಕ್ಷಕಿ ಪೆಮ್ಮಂಡ ಮಾಯಮ್ಮ, ಅಲ್ಲಪ್ಪಿರ ಕಾಳಯ್ಯ, ನಾ ಕನ್ನಡಿಗ ಟಾಮಿಥೋಮಸ್ ಸೇರಿದಂತೆ ಹಲವರು ಮಾತನಾಡಿ ಸಂತಾಪ ಸೂಚಿಸಿದರು.