*ಗೋಣಿಕೊಪ್ಪ, ಜ. ೫: ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯವನ್ನು ಶಾಸಕ, ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ. ಬೋಪಯ್ಯ ಅವರು ಗ್ರಾ.ಪಂ. ಅಧ್ಯಕ್ಷೆ ಚೈತ್ರಾ ಬಿ. ಚೇತನ್ ಹಾಗೂ ಸದಸ್ಯರುಗಳ ಸಮ್ಮುಖದಲ್ಲಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಗ್ರಂಥಾಲಯ ಡಿಜಿಟಲೀಕರಣದಿಂದ ವಿದ್ಯಾರ್ಥಿಗಳು ಹೆಚ್ಚಿನ ಅರಿವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಪತ್ರಿಕೆಯ ಓದು, ಪುಸ್ತಕದ ಅಧ್ಯಯನ ದಂತಹ ಉತ್ತಮ ಹವ್ಯಾಸವನ್ನು ಮಕ್ಕಳು ಬೆಳೆಸಿಕೊಳ್ಳಬೇಕು. ಮೊಬೈಲ್ ಗಳಿಂದ ದೂರ ಉಳಿದಷ್ಟು ಮಾನಸಿಕ ಕ್ಷೋಬೆಯಿಂದ ಹೊರಗುಳಿಯ ಬಹುದು ಎಂದು ಹೇಳಿದರು.
ಯುವ ಸಮುದಾಯದ ಪ್ರೇರಣೆಗೆ ಮತ್ತು ಮನೋಶಕ್ತಿಯನ್ನು ತುಂಬುವ ಇಚ್ಛೆಯಿಂದ ಪ್ರಧಾನ ಮಂತ್ರಿ ಮೋದಿಯವರು ದೇಶದಲ್ಲಿರುವ ಪ್ರತಿ ಗ್ರಂಥಾಲಯಗಳು ಡಿಜಿಟಲೀಕರಣ ಮಾಡುವ ಚಿಂತನೆ ಹರಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಕೊಡಗು ಡಿಜಿಟಲೀಕರಣಗೊಂಡ ಪ್ರಥಮ ಜಿಲ್ಲೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ ಎಂದು ತಿಳಿಸಿದರು.
ಓದುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದರಿಂದ ಮಾನಸಿಕ ಒತ್ತಡಗಳಿಂದ ದೂರ ಉಳಿಯಬಹುದು. ವಿದ್ಯಾರ್ಹತೆ ಹೊಂದುವುದರೊAದಿಗೆ ಪರಿಪೂರ್ಣವಾದ ಸಾಮಾಜಿಕ ಜ್ಞಾನವನ್ನು ಹೊಂದಲು ಸಾಧ್ಯವಿದೆ. ಪುಸ್ತಕ ಓದಿನಿಂದ ಮನೋಧೈರ್ಯ ಹೊಂದಿ ಕಷ್ಟಗಳನ್ನು ಎದುರಿಸುವ ಶಕ್ತಿ ತುಂಬುತ್ತದೆ ಎಂದರು.
ಅಕ್ರಮ ಸಕ್ರಮ ಸಮಿತಿ ತಾಲೂಕು ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ಗ್ರಾ.ಪಂ. ಅಧ್ಯಕ್ಷೆ ಚೈತ್ರ ಬಿ. ಚೇತನ್, ಸದಸ್ಯರುಗಳಾದ ಬಿ.ಎನ್. ಪ್ರಕಾಶ್, ಕೊಣಿಯಂಡ ಬೋಜಮ್ಮ, ಹಕೀಂ, ರಾಜೇಶ್, ಸೌಮ್ಯಬಾಲು, ಪುಷ್ಪಾ ಮನೋಜ್, ಗೀತಾ, ನೂರೇರ ರತಿ ಅಚ್ಚಪ್ಪ, ವಿವೇಕ್ ರಾಯ್ಕರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಮಂಜುರೈ, ಗ್ರಂಥಪಾಲಕಿ ಸುಂದರಿ ಇದ್ದರು.