ಭಾಗಮಂಡಲ, ಜ. ೪: ಭಾಗಮಂಡಲ ವಲಯದ ತಣ್ಣಿಮಾನಿ ಬಳಿಯ ತೊಡಿಕಾನ ಉಪ ವಲಯದ ನಿಶಾನೆ ಮೊಟ್ಟೆ ಅರಣ್ಯ ಕ್ಯಾಂಪ್ ಬಳಿ ಅಕ್ರಮವಾಗಿ ಹರಳು ಕಲ್ಲು ದಂಧೆ ನಡೆಯುತ್ತಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಅರಣ್ಯ ಇಲಾಖೆಯ ಅಧಿಕಾರಿಗಳು ನೀಡಿರುವ ವರದಿ ಆಧಾರದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ, ಕರ್ತವ್ಯದಲ್ಲಿದ್ದ ಸಿಬ್ಬಂದಿಗಳನ್ನು ವಿಚಾರಣೆ ಮಾಡಿರುವದಾಗಿ ತಿಳಿದು ಬಂದಿದೆ.

ನಿಶಾನೆ ಮೊಟ್ಟೆಯಲ್ಲಿ ಅಕ್ರಮವಾಗಿ ಹರಳುಕಲ್ಲು ದಂಧೆ ನಡೆಯುತ್ತಿರುವ ಬಗ್ಗೆ ದೊರೆತ ಮಾಹಿತಿ ಆಧಾರದಲ್ಲಿ ಸ್ಥಳಕ್ಕೆ ಕಳೆದ ಡಿ.೩೦ ರಂದು ಭಾಗಮಂಡಲ ಉಪ ವಲಯ ಅರಣ್ಯಾಧಿಕಾರಿ ಶ್ರೀಧರ ಹಾಗೂ ತೊಡಿಕಾನ ಉಪ ವಲಯ ಅರಣ್ಯಾಧಿಕಾರಿ ಮೂರ್ತಿ ಅವರುಗಳು ಭೇಟಿ ನೀಡಿ ಪರಿಶೀಲಿಸಿದಾಗ ಹರಳು ಕಲ್ಲು ದಂಧೆ ನಡೆದಿರುವದು ಕಂಡು ಬಂದಿರುವ ಬಗ್ಗೆ ಭಾಗಮಂಡಲ ವಲಯ ಅರಣ್ಯಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು. ಈ ಬಗ್ಗೆ ತಾ.೨ರಂದು ‘ಶಕ್ತಿ’ಯಲ್ಲಿ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ದೇವರಾಜು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂದರ್ಭ ಅರಣ್ಯ ಕ್ಯಾಂಪಿನಿAದ ೩೫ ಮೀ.ದೂರದಲ್ಲಿ ೨-೩ ಪಿಕ್ ಅಪ್‌ನಷ್ಟು ಹಸಿ ಮಣ್ಣು ದಾಸ್ತಾನಿರುವದು ಕಂಡು ಬಂದಿದೆ. ಈ ಅಕ್ರಮ ಚಟುವಟಿಕೆಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅಂದು ಕರ್ತವ್ಯದಲ್ಲಿದ್ದ ಇಬ್ಬರು ಅರಣ್ಯ ರಕ್ಷಕರು ಹಾಗೂ ಓರ್ವ ವೀಕ್ಷಕ ಕರ್ತವ್ಯ ಲೋಪ ಎಸಗಿರುವದು ಕಂಡು ಬರುತ್ತದೆ. ಈ ಬಗ್ಗೆ ವಿಚಾರಿಸಿ ಅವರುಗಳಿಂದ ಹೇಳಿಕೆ ಪಡೆಯಲಾಗಿದೆ. ಈ ಬಗ್ಗೆ ಮುಂದಿನ ಕ್ರಮಕ್ಕಾಗಿ ಇಬ್ಬರು ಉಪ ವಲಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿರುವ ಸಿಡಿ ಹಾಗೂ ಸಿಬ್ಬಂದಿಗಳ ಹೇಳಿಕೆಯನ್ನು ವಲಯ ಅರಣ್ಯ ಅಧಿಕಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ತಾ.೩ರಂದು ವರದಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ನಿನ್ನೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೊಯ್ಸಿನ್ ಪಾಷಾ ಅವರು ನಿಶಾನೆ ಮೊಟ್ಟೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳನ್ನು ವಿಚಾರಣೆ ಮಾಡಿದ್ದಾರೆ. ಅಲ್ಲದೆ, ಇಂದು ಸಿಬ್ಬಂದಿಗಳನ್ನು ಮಡಿಕೇರಿಯ ಕಚೇರಿಗೆ ಕರೆಸಿಕೊಂಡು ಮತ್ತೊಮ್ಮೆ ವಿಚಾರಣೆ ಮಾಡಿ ಮುಂದಿನ ಕ್ರಮ ಕೈಗೊಂಡಿರುವದಾಗಿ ತಿಳಿದು ಬಂದಿದೆ. -ಸುನಿಲ್, ಸಂತೋಷ್