ಕೋವರ್ ಕೊಲ್ಲಿ ಇಂದ್ರೇಶ್
ಸಕಲೇಶಪುರ, ಡಿ. ೬: ಪ್ರಿಯಕರನೊಂದಿಗೆ ಒಡಗೂಡಿ ಸಂಚು ರೂಪಿಸಿ ಗಂಡನನ್ನು ಕೊಲೆಗೈದು, ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ ಪತ್ನಿ, ಆತನ ಪ್ರೇಮಿ ಹಾಗೂ ಮತ್ತೋರ್ವ ವ್ಯಕ್ತಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಡಿಸೆಂಬರ್ ೨೬ ರಂದು ಹಾಸನ ಜಿಲ್ಲೆಯ ಯಸಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರಡಿಕೆರೆ ರಸ್ತೆ ಬದಿಯಲ್ಲಿ ಜಿಲ್ಲೆಯ ಶನಿವಾರಸಂತೆಯ ತ್ಯಾಗರಾಜ ಕಾಲೋನಿ ನಿವಾಸಿ ಸಂತೋಷ್ ಎಂಬಾತ ಮೃತಪಟ್ಟಿದ್ದ. ಸ್ಥಳಕ್ಕೆ ತೆರಳಿದ ಪೊಲೀಸರು ಯಾವುದೋ ವಾಹನವೊಂದು ಅಪಘಾತವೆಸಗಿ ಪರಾರಿಯಾಗಿದೆ ಎಂದು ಶಂಕಿಸಿ ‘ಹಿಟ್ ಅಂಡ್ ರನ್’ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು. ಮೇಲ್ನೋಟಕ್ಕೆ ಅಪಘಾತ ಪ್ರಕರಣವೆಂದು ಭಾವಿಸಿದ್ದ ಪೊಲೀಸರು ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಇದೊಂದು ಕೊಲೆ ಎಂದು ತಿಳಿದು ತನಿಖೆ ಚುರುಕುಗೊಳಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪತ್ನಿ ಶೃತಿ, ಆತನ ಪ್ರಿಯಕರ ಚಂದ್ರಶೇಖರ್ ಮತ್ತು ಸ್ನೇಹಿತ ಧರ್ಮರಾಜು ಬಂಧಿತ ಆರೋಪಿಗಳು.
ಗಂಡನ ಹತ್ಯೆಗೆ ‘ಪ್ಲಾನ್’
ಪ್ರಕರಣ ಸಂಬAಧ ಮಾಹಿತಿ ನೀಡಿದ ತನಿಖಾಧಿಕಾರಿ ಸಕಲೇಶಪುರ ಸರ್ಕಲ್ ಇನ್ಸ್ಪೆಕ್ಟರ್ ಚೈತನ್ಯ ಕುಮಾರ್, ಶೃತಿ ಮತ್ತು ಗಾರೆ ಕೆಲಸ ಮಾಡುವ ಸಂತೋಷ್ ೬ ವರ್ಷದ ಹಿಂದೆ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಇವರುಗಳು ಶನಿವಾರಸಂತೆಯ ತ್ಯಾಗರಾಜ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ಇವರಿಗೆ ಒಂದು ಮಗು ಕೂಡ ಇತ್ತು. ಸಂತೋಷ್ ಆಗಾಗ್ಗೆ ಕೆಲಸಕ್ಕೆಂದು ಬೇರೆ ಬೇರೆ ಊರುಗಳಿಗೆ ತೆರಳುತ್ತಿದ್ದ. ಈ ಸಂದರ್ಭದಲ್ಲಿ ಶೃತಿಗೆ ತನ್ನ ಪಕ್ಕದ ಮನೆಯಲ್ಲಿದ್ದ ವಿವಾಹಿತ ವ್ಯಕ್ತಿ ಚಂದ್ರಶೇಖರ ಎಂಬಾತನ ಜೊತೆ ಸ್ನೇಹವಾಗಿದೆ. ಸ್ನೇಹ ಪ್ರೀತಿಯಾಗಿ ಪರಿವರ್ತನೆಗೊಂಡಿದೆ. ಚಂದ್ರಶೇಖರ್ ಕೂಡ ತನ್ನ ಪತ್ನಿಯೊಂದಿಗೆ ತ್ಯಾಗರಾಜ ಕಾಲೋನಿಯಲ್ಲಿ ನೆಲೆಸಿದ್ದ, ಈತನಿಗೆ ಇಬ್ಬರು ಮಕ್ಕಳು ಕೂಡ ಇದ್ದರು. ಇವೆಲ್ಲದರ ನಡುವೆ ಇವರಿಗೆ ಪ್ರೀತಿ ಬೆಳೆದಿದೆ.
ಗಂಡ ಇದ್ದರೆ ತಮ್ಮ ಸಂಬAಧಕ್ಕೆ ಅಡ್ಡಿಯಾಗುತ್ತದೆ ಎಂದು ಅವನನ್ನೆ ಮುಗಿಸಲು ಶೃತಿ ತನ್ನ ಪ್ರಿಯಕರನೊಂದಿಗೆ ಸಂಚು ರೂಪಿಸುತ್ತಾಳೆೆ. ಡಿಸೆಂಬರ್ ೨೬ ರಂದು ಗಾರೆ ಕೆಲಸ ಮುಗಿಸಿ ಯಸಳೂರಿನ ರಸ್ತೆಯ ಮೂಲಕ ಬೈಕ್ನಲ್ಲಿ ಬರುತ್ತಾನೆ ಎಂದು ಶೃತಿಗೆ ತಿಳಿದಿತ್ತು. ಇದನ್ನು ಪ್ರಿಯಕರ ಚಂದ್ರಶೇಖರನಿಗೆ ತಿಳಿಸಿದ ಶೃತಿ ಹತ್ಯೆಗೆ ಪ್ಲಾನ್ ನೀಡುತ್ತಾಳೆ. ಇದರ ಅನ್ವಯ ಪ್ರಿಯಕರ ಚಂದ್ರಶೇಖರ ತನ್ನ ಸಹಚರ ಧರ್ಮರಾಜ ಎಂಬಾತನೊAದಿಗೆ ಮಾರುತಿ ೮೦೦ ಕಾರಿನಲ್ಲಿ ಕಬ್ಬಿಣದ ರಾಡ್ನೊಂದಿಗೆ ಕೊಲೆ ಮಾಡಲು ಸಜ್ಜಾಗಿಯೇ ನಿರ್ಜನ ಪ್ರದೇಶದಲ್ಲಿ ಕಾದು ಕೂರುತ್ತಾರೆ.
ಪೆಟ್ರೋಲ್ ನೆಪ
ಧರ್ಮರಾಜನು ಕೈಯ್ಯಲ್ಲಿ ಪೆಟ್ರೋಲ್ ತುಂಬಿದ ‘ಕ್ಯಾನ್’ ಒಂದನ್ನು ಹಿಡಿದುಕೊಂಡು ಕಾರು ನಿಲ್ಲಿಸಿರುವ ಜಾಗದಿಂದ ಮೂರು ಕಿಲೋಮೀಟರ್ ದೂರದಲ್ಲಿ ನಿಂತಿರುತ್ತಾನೆ. ಸಂತೋಷನ ಬೈಕ್ ಬಂದ ಕೂಡಲೇ ತಡೆದು ನಿಲ್ಲಿಸಿ ಪೆಟ್ರೋಲ್ ಇಲ್ಲದೆ ಕಾರು ನಿಂತು ಹೋಗಿದೆ ಎಂದು ನಂಬಿಕೆಯ ಮಾತುಗಳನ್ನಾಡುತ್ತಾನೆ. ಧರ್ಮರಾಜು ಸಂತೋಷ್ಗೆ ಪರಿಚಿತನಿದ್ದ ಹಿನ್ನೆಲೆ ಬೈಕಿನಲ್ಲಿ ಕೂರಿಸಿಕೊಂಡು ಪೆಟ್ರೋಲ್ ಖರೀದಿಸಿ ಸಂತೋಷ್ ಕಾರು ಇರುವ ಸ್ಥಳಕ್ಕೆ ಬರುತ್ತಾರೆÉ. ಅಲ್ಲಿ ಚಂದ್ರಶೇಖರ ಕಾರಿಗೆ ಪೆಟ್ರೋಲ್ ತುಂಬಿಸುತ್ತಾನೆ. ಆದರೆ ಕಾರು ‘ಸ್ಟಾರ್ಟ್’ ಆಗುವುದಿಲ್ಲ. ನಂತರ ಬಾನೆಟ್ ತೆಗೆದು ಏನೋ ಪರೀಕ್ಷೆ ಮಾಡುವÀಂತೆ ನಟಿಸುತ್ತಾನೆ. ಆಗ ಸಂತೋಷನೂ ಬೈಕ್ನಿಂದ ಇಳಿದು ಬಾನೆಟ್ ಬಳಿ ಬಂದು ನೋಡುತ್ತಾನೆ. ಆಗ ಕಬ್ಬಿಣದ ರಾಡ್ನಲ್ಲಿ ಧರ್ಮರಾಜ್ ಸಂತೋಷನ ತಲೆಗೆ ಬಲವಾಗಿ ಹಲ್ಲೆಮಾಡುತ್ತಾನೆ.
ಚಂದ್ರಶೇಖರನೂ ರಾಡ್ನಿಂದ ಹೊಡೆಯುತ್ತಾನೆ. ಹಲ್ಲೆಯಾದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಂತೋಷ ಮೃತಪಡುತ್ತಾನೆ. ಇದೆಲ್ಲ ಐದೇ ನಿಮಿಷದಲ್ಲಿ ನಡೆದುಹೋಗುತ್ತದೆ. ನಂತರ ಶವ ಬಿದ್ದಿದ್ದ ಸ್ಥಳದಲ್ಲೇ ರಕ್ತ ಚೆಲ್ಲಿದ್ದು ಆತನ ಬೈಕನ್ನು ಅಲ್ಲೇ ಬೀಳಿಸಿ, ಅಪಘಾತದಂತೆ ಸೃಷ್ಟಿಸುವ ಸಂಚು ನಡೆಸುತ್ತಾರೆ. ನಂತರ ಕಾರಿನೊಂದಿಗೆ ಬಂದು ಆರೋಪಿಗಳು ಮನೆ ಸೇರಿಕೊಳ್ಳುತ್ತಾರೆ.
ವರದಿಯಲ್ಲಿ ಸತ್ಯ ಬಯಲು
ಮೇಲ್ನೋಟಕ್ಕೆ ಅಪಘಾತ ಪ್ರಕರಣ ಎಂಬAತೆ ಕಾಣುತ್ತಿದ್ದ ಸಂತೋಷ್ ಸಾವಿನ ಪ್ರಕರಣಕ್ಕೆ ತಿರುವು ದೊರೆತಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ. ಡಿ. ೨೬ ರಂದು ಸಂಜೆ ಘಟನೆ ನಡೆದು ೨೭ ರಂದು ಕಾನೂನಾತ್ಮಕ ಪ್ರಕ್ರಿಯೆ ನಡೆದ ನಂತರ ದೇಹವನ್ನು ಶನಿವಾರಸಂತೆಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು.
ಈ ಸಂದರ್ಭ ಪತ್ನಿ ಏನೂ ತಿಳಿಯದ ರೀತಿ ಅಮಾಯಕಿಯಂತೆ ವರ್ತಿಸಿದ್ದಾಳೆ. ಕೊಲೆಯ ಉಳಿದ ಆರೋಪಿಗಳು ಈ ಸಂದರ್ಭ ಮೊಬೈಲ್ ಸ್ವಿಚ್ ಆಫ್ ಮಾಡಿ ಅಜ್ಞಾತ ಸ್ಥಳದಲ್ಲಿದ್ದರು.
ಸಕಲೇಶಪುರದ ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದು ವೈದ್ಯರು ವ್ಯಕ್ತಿ ಅಪಘಾತದಿಂದ ಮೃತಪಟ್ಟಿಲ್ಲ. ಯಾವುದೋ ಬಲವಾದ ಆಯುಧದಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂದು ಕೆಲ ದಿನಗಳ ನಂತರ ಪೊಲೀಸರಿಗೆ ವರದಿ ನೀಡಿದರು.
ನಂತರ ೩೦೨ ಸೆಕ್ಷನ್ ಅನ್ವಯ ಮೊಕದ್ದಮೆ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದರು. ಇದಕ್ಕೆ ಪೂರಕವಾಗಿ ಶೃತಿಯ ಮೊಬೈಲ್ ಸಿಡಿಆರ್ ಪಡೆಯುವ ಪೊಲೀಸರು ಆಕೆಯ ಸಂಪರ್ಕಗಳ ಮೇಲೆ ಕಣ್ಗಾವಲು ಇರಿಸುತ್ತಾರೆ. ಸಾಕ್ಷö್ಯ ಸಂಗ್ರಹಿಸುತ್ತಿದ್ದ ಸಂದರ್ಭ ಸಂತೋಷ್ ಪತ್ನಿ ಶೃತಿಯೇ ತನ್ನ ಪ್ರಿಯಕರ ಚಂದ್ರಶೇಖರ ಜೊತೆಗೆ ಸೇರಿಕೊಂಡು ಗಂಡನ ಕೊಲೆ ಮಾಡಿಸಿರುವುದು ಧೃಢಪಟ್ಟಿದೆ. ಕೊಲೆಗೆ ಚಂದ್ರಶೇಖರನಿಗೆ ಧರ್ಮರಾಜ ಎಂಬಾತ ಸಹಾಯ ಮಾಡಿದ್ದಾನೆ ಎಂದು ನೈಜಾಂಶ ಬಯಲಾಗಿದೆ.
ಕೊಲೆಯ ನಂತರ ಶೃತಿ ತನ್ನ ಪ್ರಿಯಕರನೊಂದಿಗೆ ಮಾತಾಡಿದನ್ನೂ ರೆಕಾರ್ಡ್ ಮಾಡಿಕೊಂಡ ಪೊಲೀಸರು ತಾ. ೪ ರಂದು ತ್ಯಾಗರಾಜ ಕಾಲೋನಿಯಿಂದ ಮೂವರನ್ನೂ ಬಂಧಿಸುತ್ತಾರೆ. ಪೊಲೀಸರ ಮುಂದೆ ತಪ್ಪೊಪ್ಪಿಕೊಂಡ ಮೂವರನ್ನೂ ಬುಧವಾರ ಸಕಲೇಶಪುರದ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.