*ವೀರಾಜಪೇಟೆ, ಜ. ೬: ವೀರಾಜ ಪೇಟೆ ಪಟ್ಟಣ ಪಂಚಾಯಿತಿಯು ಇದೀಗ ಪುರ ಸಭೆಯಾಗಿ ಮೇಲ್ದರ್ಜೆಗೇರಿದೆ. ಶಾಸಕ ಕೆ.ಜಿ. ಬೋಪಯ್ಯ ಅವರ ಪ್ರಯತ್ನ ದಿಂದ ಸರಕಾರದ ಆದೇಶ ಪ್ರಕಟ ಗೊಂಡಿದೆ. ವೀರಾಜಪೇಟೆ ತಾಲೂಕು ಅತೀ ದೊಡ್ಡ ಕ್ಷೇತ್ರ ವಿಸ್ತಾರವಿರುವ ಸುಮಾರು ಎರಡೂವರೆ ಲಕ್ಷ ಜನಸಂಖ್ಯೆಯಿರುವ ವಿಧಾನಸಭಾ ಕ್ಷೇತ್ರ, ಅಲ್ಲದೆ, ವೀರಾಜಪೇಟೆ ತಾಲೂಕು ಕೊಡಗಿನ ಗಡಿಭಾಗದಲ್ಲಿದೆ, ನೆರೆಯ ಕೇರಳ ರಾಜ್ಯಕ್ಕೆ ಅತೀ ಸಮೀಪ ದಲ್ಲಿದೆ. ಜೊತೆಗೆ ವೀರರಾಜೇಂದ್ರ ಕಟ್ಟಿದ ಐತಿಹಾಸಿಕ ನಗರಿ ಎಂಬ ಹೆಗ್ಗಳಿಕೆಯೂ ಜೊತೆಗಿದೆ.

ಕೊಡಗು ಈ ಹಿಂದೆ ‘ಸಿ' ರಾಜ್ಯವಾಗಿದ್ದಾಗ ಅಂದಿನ ಕಾಲಕ್ಕೆ ೧೯೦೪ರಲ್ಲಿ ಪುರಸಭೆಯಾದ ಬಳಿಕ ೧೯೮೬ ರವರೆಗೆ ಪುರಸಭೆಯಾಗಿಯೇ ಮುಂದುವರೆಯಿತು. ೧೯೮೬ ಯಿಂದ ೧೯೯೫ ವರೆಗೂ ಮಂಡಲ ಪಂಚಾ ಯತಿಯಾಗಿತ್ತು. ಮುಂದುವರೆದು ಏಳು ತಿಂಗಳು ಗ್ರಾಮ ಪಂಚಾಯಿತಿ ಯಾಗಿತ್ತು. ನಂತರದಲ್ಲಿ, ವೀರಾಜಪೇಟೆ ನಗರ, ಪಟ್ಟಣ ಪಂಚಾಯಿತಿಯಾಗೀ ೧೯೯೬ ರಲ್ಲಿ ಅಸ್ತಿತ್ವಕ್ಕೆ ಬಂದಿತು. ನಗರದ ಒಟ್ಟು ವಿಸ್ತಿರ್ಣ ೮.೨೬ ಚ.ಕಿಮೀ, ೨೦೧೧ರ ಜನಗಣತಿ ಪ್ರಕಾರ ನಗರದ ಜನಸಂಖ್ಯೆ ೧೭,೨೪೬, ಪ.ಪಂ. ಪ್ರಕಾರ ಇಂದಿನ ಜನಸಂಖ್ಯೆ ಅಂದಾಜು ೨೫ ಸಾವಿರಕ್ಕೂ ಅಧಿಕವಾಗಿದೆ.

ಜನಸಂಖ್ಯೆ ಹೆಚ್ಚಾದಂತೆ ನಗರ ಕೂಡಾ ಬೆಳೆಯುತ್ತಲೇ ಇದೆ. ನಗರವೂ ಕೇರಳ ಕಡೆಗೊಂದಿಷ್ಟು ಬೆಳೆಯುತ್ತಿದ್ದರೆ ಇತ್ತ ಮಡಿಕೇರಿ ಕಡೆಗೂ ಬೆಳೆಯುತ್ತಿದೆ. ಹಾಗೇ ಗೋಣಿಕೊಪ್ಪ

(ಮೊದಲ ಪುಟದಿಂದ) ಕಡೆಗೂ ಲೇಔಟ್‌ಗಳು ನಿರ್ಮಾಣವಾಗುತ್ತಾ ತನ್ನ ಗಾತ್ರ ಹಿಗ್ಗಿಸಿಕೊಳ್ಳುತ್ತಾ ಸಾಗುತ್ತಿದೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಪ್ರಸ್ತುತ ೧೮ ವಾರ್ಡುಗಳು ಇದ್ದು, ಅದರಲ್ಲಿ ಮೂರು ಕೊಳಗೇರಿಗಳು ಸೇರಿವೆ. ಪಟ್ಟಣ ಪಂಚಾಯಿತಿಯ ವಾರ್ಷಿಕ ಆದಾಯ ಪಟ್ಟಣ ಪಂಚಾಯಿತಿ ಮೂಲಗಳ ಪ್ರಕಾರ ೧ ಕೋಟಿ ಸನಿಹವಿದೆ. ದಿನದಿಂದ ದಿನಕ್ಕೆ ನಗರದ ಹೊಸ ಅಂಗಡಿ ಮಳಿಗೆಗಳು, ಮಾಂಸದ ಅಂಗಡಿಗಳು, ರೆಸಾರ್ಟ್, ಹೊಟೇಲ್ ಉದ್ಯಮ ಹೊಸ ವ್ಯಾಪಾರ ವಹಿವಾಟುಗಳು ನಗರದಲ್ಲೂ, ನಗರದಾಚೆಗೂ ತಲೆಯೆತ್ತುತ್ತಿವೆ.

ನಗರ ವ್ಯಾವಹಾರಿಕವಾಗಿ ಬೆಳೆಯುತ್ತಿದೆ. ಜನಸಂಖ್ಯೆಯೂ ಹೆಚ್ಚುತ್ತಿದೆ. ಇಂಥ ಸಮಯದಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಲು ಅಗತ್ಯ ಪ್ರಯತ್ನಗಳನ್ನು ಈ ಕ್ಷೇತ್ರದ ಶಾಸಕರಾದ ಕೆ.ಜಿ ಬೋಪಯ್ಯ ಮಾಡುತ್ತಲೇ ಬಂದಿದ್ದರು. ವೀರಾಜಪೇಟೆ ಪಟ್ಟಣ ಪಂಚಾಯಿತಿ ಕೂಡಾ ಈ ಬಗ್ಗೆ ಈಗಾಗಲೇ (ಎಲ್.ಪಿ.ಎ) ಲೋಕಲ್ ಪ್ಲಾನಿಂಗ್ ಏರಿಯಾ ಅಂದರೇ ನಗರದ ವಿಸ್ತೀರ್ಣದ ನಕ್ಷೆಯನ್ನು ತಯಾರು ಮಾಡಿದ್ದು ಅದಕ್ಕೆ ಜಿಲ್ಲಾಧಿಕಾರಿಯವರ ಅನುಮೋದನೆಯೂ ದೊರೆತಾಗಿತ್ತು.

ಇಲ್ಲಿತನಕ ವೀರಾಜಪೇಟೆ ಪಟ್ಟಣ ಪಂಚಾಯಿತಿಯ ವಿಸ್ತಿರ್ಣ ೨೬೩.೦೦ ಚಕೀಮಿ ಆಗಿತ್ತು. ಈಗ ಹೊಸದಾಗಿ ತಯಾರಾಗಿರುವ ವೀರಾಜಪೇಟೆಗೆ ಸಂಬAಧಪಟ್ಟ ನಗರದ ನಕ್ಷೆಯಲ್ಲಿ ೬೩೮.೭೦ ಚ.ಕಿಮೀ ವಿಸ್ತೀರ್ಣವನ್ನು ಸೇರಿಸಿಕೊಂಡು ನಗರ ಹೊಸದಾಗಿ ಜಾಗಗಳನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಂಡು ಈಗ ಪಟ್ಟಣ ಪಂಚಾಯಿತಿಯ ಒಟ್ಟು ವಿಸ್ತೀರ್ಣ ೯೦೧.೭೦ ಚ.ಕಿಮಿ ವರೆಗೂ ಏರಿಕೆಯಾಗಿದೆ. ಅಂದರೆ ವೀರಾಜಪೇಟೆಗೆ ಅತ್ಯಂತ ಸಮೀಪ ವಿರುವ ಹಲವು ಗ್ರಾಮಗಳ ಭಾಗಶಃ ಭಾಗ ಇನ್ನುಮುಂದೆ ಪುರಸಭೆಯ ವ್ಯಾಪ್ತಿಗೆ ಬರಲಿವೆ.

ಈಗಾಗಲೇ ವೀರಾಜಪೇಟೆಯ ಈ ಹೊಸ ಎಲ್.ಪಿ.ಎ ಜೊತೆಗೆ ವೀರಾಜಪೇಟೆ ನಗರ ಪುರಸಭೆ ಯಾಗಲು ಇರುವ ಅರ್ಹತೆಗಳನ್ನು ಆಧರಿಸಿದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಇಂದು ರಾಜ್ಯಪಾಲರ ಅಂಕಿತ ದೊರಕಿದ್ದು ವೀರಾಜಪೇಟೆ ಅಧಿಕೃತವಾಗಿ ಪಟ್ಟಣ ಪಂಚಾಯಿತಿ ಯಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದೆ.

ಅಲ್ಲಿಗೆ ಅನುದಾನ, ಸಿಬ್ಬಂದಿ, ಅಭಿಯಂತರರು ಎಲ್ಲಾ ವಿಚಾರದಲ್ಲೂ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೆ ಏರುತ್ತದೆ. ನಗರದ ಅಭಿವೃದ್ಧಿಯ ಚಿತ್ರಣವೂ ಬದಲಾಗುತ್ತದೆ.

-ಉಷಾಪ್ರೀತಮ್