ಪೊನ್ನಂಪೇಟೆ, ಜ.೫: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಜಲ ಜೀವನ್ ಮಿಷನ್ ಒಂದಾಗಿದ್ದು ಪ್ರತಿ ಗ್ರಾಮೀಣ ಕುಟುಂಬಕ್ಕೆ ಕಾರ್ಯಾತ್ಮಕ ನಳ (ನಲ್ಲಿ) ಸಂಪರ್ಕ ನೀಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಪ್ರತಿಯೊಬ್ಬರಿಗೂ ಪ್ರತಿದಿನ ೫೫ ಲೀ. ಶುದ್ಧ ನೀರು ಒದಗಿಸುವುದು ಈ ಯೋಜನೆಯ ಗುರಿಯಾಗಿದೆ.

ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಅನುಷ್ಠಾನಕ್ಕೆ ತಂದಿರುವ ಜಲಜೀವನ್ ಮಿಷನ್ ಯೋಜನೆ ಇಂದು ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆಯಿಂದಾಗಿ ತಲುಪಬೇಕಾದವರಿಗೆ ಸರಿಯಾಗಿ ತಲುಪುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಸ್ಪಷ್ಟ ಉದಾಹರಣೆ ಇತ್ತೀಚೆಗೆ ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್‌ನ ಕಾರ್ಯಕ್ರಮ. ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಿಕೊಪ್ಪ, ಹೊಳಕರೆ ಭಾಗದ ಮನೆಗಳಿಗೆ ಕಿರುಗೂರು ಗ್ರಾಮ ಪಂಚಾಯಿತಿಯಿAದ ಮೊದಲೇ ನಲ್ಲಿ ಸಂಪರ್ಕ ಕಲ್ಪಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇಂಜಿನಿಯರ್ ಹಾಗೂ ಗುತ್ತಿಗೆದಾರ ನೀರಿನ ಸಂಪರ್ಕ ಇಲ್ಲದ ಮನೆಗಳಿಗೆ, ಸಂಪರ್ಕ ಕೊಡಿಸುವ ಬದಲು, ಪಂಚಾಯಿತಿಯಿAದ ನೀರಿನ ವ್ಯವಸ್ಥೆ ಕಲ್ಪಿಸಿರುವ ಮನೆಗಳ ಪೈಪನ್ನು ಕತ್ತರಿಸಿ ಅಲ್ಲಿಗೆ ಮೀಟರನ್ನು ಅಳವಡಿಸುವ ಕೆಲಸ ಮಾಡಿಸುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಕಡೆಗಳಲ್ಲಿ ಕುಡಿಯುವ ನೀರಿನ ಸಂಪರ್ಕ ಇಲ್ಲ. ಇಂತಹ ಮನೆಗಳಿಗೆ ಮೊದಲು ಸಂಪರ್ಕ ಕಲ್ಪಿಸುವುದನ್ನು ಬಿಟ್ಟು, ಪಂಚಾಯಿತಿಯಿAದ ನೀರಿನ ಸಂಪರ್ಕ ಕಲ್ಪಿಸಿರುವ ಮನೆಗಳಿಗೆ ಮೀಟರ್ ಅಳವಡಿಸುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಗ್ರಾಮಸ್ಥರು ಕಿರುಗೂರು ಗ್ರಾಮ ಪಂಚಾಯಿತಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಚೆಪ್ಪುಡಿರ ರಾಕೇಶ್ ದೇವಯ್ಯ ಅವರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರ ತಂಡ ತೆರಳಿ ಪರಿಶೀಲಿಸಿದ್ದಾರೆ.

ಈ ಬಗ್ಗೆ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಕಿರುಗೂರು ಗ್ರಾಮ ಪಂಚಾಯಿತಿಗೆ ಇಂಜಿನಿಯರ್ ಸುನಿಲ್ ಹಾಗೂ ಗುತ್ತಿಗೆದಾರ ಬಲರಾಮ್ ಎಂಬವರನ್ನು ಕರೆಸಿ, ತರಾಟೆಗೆ ತೆಗೆದುಕೊಂಡರು. ಮೊದಲು ನೀರಿನ ಸಂಪರ್ಕ ಇಲ್ಲದಿರುವ ಮನೆಗಳಿಗೆ ನೀರಿನ ಸಂಪರ್ಕವನ್ನು ಕಲ್ಪಿಸಿ ನಂತರ ನೀರಿನ ಸಂಪರ್ಕ ಇರುವ ಮನೆಗೆ ಮೀಟರ್ ಅಳವಡಿಸಿ ಎಂದು ಇಂಜಿನಿಯರ್ ಹಾಗೂ ಗುತ್ತಿಗೆದಾರನಿಗೆ ತಾಕೀತು ಮಾಡಿದರು.

ಇದಕ್ಕೆ ಒಪ್ಪಿಕೊಂಡ ಇಂಜಿನಿಯರ್ ಹಾಗೂ ಗುತ್ತಿಗೆದಾರ, ನೀರಿನ ಸಂಪರ್ಕ ಇಲ್ಲದ ಮನೆಗಳನ್ನು ಗುರುತಿಸಿ, ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಿಸಲಾಗುವುದು ಎಂದು ನೆರೆದಿದ್ದವರಿಗೆ ಭರವಸೆ ನೀಡಿದರು.

ಈ ಸಂದರ್ಭ ಕಿರುಗೂರು ಗ್ರಾ.ಪಂ.ಅಧ್ಯಕ್ಷ ಪುತ್ತಾಮನೆ ಜೀವನ್, ಗ್ರಾ.ಪಂ.ಸದಸ್ಯರಾದ ಚೆಪ್ಪುಡಿರ ರಾಕೇಶ್ ದೇವಯ್ಯ, ರೇಖಾ ಕೀರ್ತಿನ್, ಪಿಡಿಓ ಸತೀಶ್, ಗ್ರಾಮಸ್ಥರಾದ ಸಿ.ಪಿ.ವಿವೇಕ್, ಚೆರಿಯಪ್ಪಂಡ ಕೀರ್ತಿನ್, ಪದಾರ್ಥಿ ಮಂಜುನಾಥ್, ಪೆಮ್ಮಂಡ ಮಧು, ಗಾಣಂಗಡ ಚಿಪ್ಪುಣು, ಕೊದೇಂಗಡ ಸುರೇಶ್, ಪೆಮ್ಮಂಡ ಅಯ್ಯಪ್ಪ, ಕೊದೇಂಗಡ ಸುಬ್ರಮಣಿ, ಕೊಕ್ಕೆಂಗಡ ಸಚಿನ್, ಚೆರಿಯಪ್ಪಂಡ ರಾಜ, ಗಾಣಂಗಡ ಪ್ರಾನ್ಸಿ, ಕಾಕಮಾಡ ಮುತ್ತು, ತೀತರಮಾಡ ಗಿರೀಶ್, ಕೋಪಟಿರ ಗಾಂಧಿ, ಕಾಕಮಾಡ ಡಾಲು, ಕಾಕಮಾಡ ಕುಟ್ಟಪ್ಪ, ಕಾಕಮಾಡ ಕಂಬು, ಕಾಕಮಾಡ ಹರೀಶ್, ಹೊನ್ನಿಕೊಪ್ಪ ರಂಗ ಮುಂತಾದವರು ಹಾಜರಿದ್ದರು.

-ವರದಿ : ಚನ್ನನಾಯಕ