ಸೋಮವಾರಪೇಟೆ, ಜ. ೪: ಬಿಳಿ ಫಲಕದ ವಾಹನಗಳಲ್ಲಿ ಬಾಡಿಗೆ ತೆರಳುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಈ ಹಿಂದೆಯೇ ಪೊಲೀಸ್ ಹಾಗೂ ಆರ್‌ಟಿಓ ಇಲಾಖೆಗೆ ಮನವಿ ಮಾಡಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆ ಪೊಲೀಸ್ ಠಾಣೆ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ಟ್ಯಾಕ್ಸಿ ಡ್ರೆöÊರ‍್ಸ್ ಆರ್ಗನೈಸೇಷನ್ ಎಚ್ಚರಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಬಿ.ವಿ. ರವಿ, ಸರಕಾರಕ್ಕೆ ತೆರಿಗೆಯನ್ನು ವಂಚಿಸುತ್ತಿರುವ ವೈಟ್ ಬೋರ್ಡ್ ಖಾಸಗಿ ವಾಹನಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವವರೆಗೆ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದರು.
ಸೋಮವಾರಪೇಟೆ ತಾಲೂಕಿನಾದ್ಯಂತ ವೈಟ್ ಬೋರ್ಡ್ ವಾಹನಗಳ ಮಾಲೀಕರು ಬಾಡಿಗೆಗೆ ತೆರಳುತ್ತಿದ್ದು ಇದರಿಂದ ಸರಕಾರಕ್ಕೆ ಪ್ರಾಮಾಣಿಕವಾಗಿ ತೆರಿಗೆ ಪಾವತಿಸಿ ಟ್ಯಾಕ್ಸಿ ಓಡಿಸುತ್ತಿರುವ ನಮಗೆ ಜೀವನ ಸಾಗಿಸಲು ಕಷ್ಟವಾಗಿದೆ. ವಾರ್ಷಿಕ ೪೦ ರಿಂದ ೫೦ ಸಾವಿರ ತೆರಿಗೆ ಪಾವತಿಸುವ ಟ್ಯಾಕ್ಸಿ ಚಾಲಕರು ಬಾಡಿಗೆ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿವರಿಸಿದರು.
ಪಟ್ಟಣದಲ್ಲಿ ದ್ವಿಚಕ್ರ ವಾಹನ ಮಾರಾಟ ಅಂಗಡಿ ಇಟ್ಟುಕೊಂಡಿರುವ ಕೆಲವರು ದಿನಕ್ಕೆ ೧೫೦೦ ರೂ.ಗಳಂತೆ ಪ್ರವಾಸಿಗರಿಗೆ ಬಾಡಿಗೆಗೆ ನೀಡುತ್ತಿದ್ದಾರೆ. ಇದರ ಬಗ್ಗೆ ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆಗೂ ದೂರು ಸಲ್ಲಿಸಲಾಗಿದೆ ಎಂದರು.
ಮುAದಿನ ಒಂದು ತಿಂಗಳ ಒಳಗೆ ಬಾಡಿಗೆ ಮಾಡುತ್ತಿರುವ ಖಾಸಗಿ ವಾಹನ ಮಾಲೀಕರು ತಮ್ಮ ವಾಹನಗಳನ್ನು ಹಳದಿ ಬೋರ್ಡ್ಗೆ ಪರಿವರ್ತಿಸದೇ ಇದ್ದಲ್ಲಿ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು. ಹಳದಿ ಫಲಕದ ಟ್ಯಾಕ್ಸಿಗಳನ್ನು ಪೋಲೀಸ್ ಠಾಣೆ ಮುಂದೆ ನಿಲ್ಲಿಸಿ, ಪೊಲೀಸರಿಗೆ ಕೀ ಗಳನ್ನು ನೀಡಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ಮಂಜುನಾಥ್, ಉಪಾಧ್ಯಕ್ಷ ಎಸ್. ಉಮೇಶ್, ಖಜಾಂಚಿ ಕೆ.ಎನ್.ದೀಪಕ್, ಸಹ ಕಾರ್ಯದರ್ಶಿ ಡಿ.ಹೆಚ್.ರಾಘವೇಂದ್ರ ಉಪಸ್ಥಿತರಿದ್ದರು.