ಮಡಿಕೇರಿ, ಜ. ೪: ರಾಜ್ಯ ವಿಧಾನಪರಿಷತ್‌ಗೆ ಕೊಡಗು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಮೂಲಕ ಚುನಾಯಿತರಾಗಿರುವ ನೂತನ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಅವರು ತಾ.೬ ರಂದು (ನಾಳೆ) ಅಧಿಕೃತವಾಗಿ ಅಧಿಕಾರಕ್ಕೆ ಬರಲಿದ್ದಾರೆ. ರಾಜ್ಯದಲ್ಲಿ ನೂತನವಾಗಿ ಚುನಾಯಿತರಾಗಿರುವ ೨೫ ವಿಧಾನಪರಿಷತ್ ಸದಸ್ಯರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ತಾ. ೬ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದೆ. ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯಿಂದ ಕಳೆದ ಅವಧಿಯಲ್ಲಿ ಆರು ವರ್ಷಗಳ ಸದಸ್ಯರಾಗಿದ್ದ ಸುನಿಲ್ ಸುಬ್ರಮಣಿ ಅವರು ಸೇರಿ ದಂತೆ ೨೫ ಸದಸ್ಯರ ಅಧಿಕಾರಾವಧಿ ತಾ. ೫ರಂದು (ಇಂದು) ಕೊನೆ ಗೊಳ್ಳುತ್ತಿದೆ. ಈ ಸ್ಥಾನಕ್ಕೆ ಈಗಾಗಲೇ ಚುನಾವಣೆ ನಡೆದಿದ್ದು, ನೂತನ ಸದಸ್ಯರಾಗಿ ಕೊಡಗಿನಿಂದ ಚುನಾಯಿತರಾಗಿರುವ ಸುಜಾ ಕುಶಾಲಪ್ಪ ತಾ. ೬ರಿಂದ ಅಧಿಕೃತವಾಗಿ ವಿಧಾನಪರಿಷತ್ ಸದಸ್ಯರಾಗಿ ಅಧಿಕಾರಕ್ಕೆ ಬರಲಿದ್ದಾರೆ. ಇವರೊಂದಿಗೆ ಜಿಲ್ಲೆಯ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ಅಧಿಕಾ ರಾವಧಿಯೂ ಕೂಡ ತಾ. ೫ಕ್ಕೆ ಕೊನೆಗೊಳ್ಳುತ್ತಿದೆ. ಆದರೆ ಇವರು ದಕ್ಷಿಣ ಕನ್ನಡದಿಂದ ಮರು ಆಯ್ಕೆಗೊಂಡಿರುವ ಹಿನ್ನೆಲೆಯಲ್ಲಿ ಮತ್ತೆ ಸದಸ್ಯರಾಗಿಯೇ ಕಾರ್ಯನಿರ್ವಹಿಸಲಿದ್ದು, ಇವರ ಸಚಿವ ಸ್ಥಾನವೂ ಯಥಾಸ್ಥಿತಿ ಯಲ್ಲಿಯೇ ಮುಂದುವರಿಯಲಿದೆ. ಸುಜಾ ಕುಶಾಲಪ್ಪ ಅವರು ಕೊಡವ ಸಾಂಪ್ರದಾಯಿಕ ಧಿರಿಸಾದ ಕುಪ್ಯಚೇಲೆಯೊಂದಿಗೆ ಪ್ರಮಾಣವಚನ ಸ್ವೀಕರಿಸಲಿದ್ದು ಪಕ್ಷದ ಪ್ರಮುಖರು, ಬೆಂಬಲಿಗರು ಪಾಲ್ಗೊಳ್ಳಲಿದ್ದಾರೆ.