ವೀರಾಜಪೇಟೆ, ಜ. ೫: ಕೆ.ಪಿ.ಎಸ್.ಸಿ/ಯು.ಪಿ.ಎಸ್.ಸಿ.ಯಿಂದ ನಡೆಸಲಾಗುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬAಧಿಸಿದAತೆ ಜನಾಂಗದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತೆ ಕೊಡಗು ಕೆಂಬಟ್ಟಿ ಸಮಾಜದಿಂದ ಎರಡು ದಿನಗಳ ತರಬೇತಿ ಕಾರ್ಯಾಗಾರ ಇತ್ತೀಚೆಗೆ ನಗರದಲ್ಲಿ ಆಯೋಜನೆಗೊಂಡಿತ್ತು.

ಕೊಡಗು ಜಿಲ್ಲಾ ಕೆಂಬಟ್ಟಿ ಸಮಾಜದಿಂದ ವೀರಾಜಪೇಟೆ ನಗರದ ಮುಖ್ಯ ರಸ್ತೆಯಲ್ಲಿರುವ ದರ್ಶನ್ ರೆಸಿಡೆನ್ಸಿ ಸಭಾಂಗಣದಲ್ಲಿ ಕೆ.ಪಿ.ಎಸ್.ಸಿ. ಮತ್ತು ಯು.ಪಿ.ಎಸ್.ಸಿ. ಪರಿಕ್ಷೇಗಳಿಗೆ ಸಿದ್ಧತೆ ಹಾಗೂ ಪೂರ್ವಭಾವಿ ತರಬೇತಿ ಏರ್ಪಡಿಸಲಾಗಿತ್ತು.

ತರಬೇತಿ ಕಾರ್ಯಾಗಾರಕ್ಕೆ ಮುಖ್ಯ ಅತಿಥಿಗಳಾಗಿ ಅಗಮಿಸಿ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರು ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಮಂಡೆಕುಟ್ಟಡ ಪವಿತ್ರ ಗಣಪತಿ ಅವರು, ಜನಾಂಗದ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಉನ್ನತ ವ್ಯಾಸಂಗ ಪಡೆಯುವುದು ಮುಖ್ಯವಾಗಿದೆ. ಅದರಂತೆಯೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ಎದುರಿಸಿ ಯಶಸ್ಸುಗಳಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಇದೇ ಮೊದಲ ಬಾರಿಗೆ ಸಮಾಜದ ವತಿಯಿಂದ ಇಂತಹ ತರಬೇತಿ ಶಿಬಿರವನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ನಿವೃತ್ತ ಅಪರ ಕಾರ್ಮಿಕ ಆಯುಕ್ತರು ಹಾಗೂ ಸಮಾಜದ ಗೌರವಾಧ್ಯಕ್ಷ ಮೊಣ್ಣಕುಟ್ಟಡ ರಘು ಉತ್ತಪ್ಪ (ಕೆ.ಎ.ಎಸ್.) ಹಾಸನ ಜಿಲ್ಲೆಯ ಉಪವಿಭಾಗಾಧಿಕಾರಿಗಳಾದ ಎಂ.ಬಿ. ಚೆನ್ನಕೇಶವ (ಕೆ.ಎ.ಎಸ್.) ಕಾರ್ಯಕ್ರಮದ ಕುರಿತು ಮಾತನಾಡಿದರು.

ನಿವೃತ್ತ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮತ್ತು ಸಮಾಜದ ಅಧ್ಯಕ್ಷ ದೊಡ್ಡಕುಟ್ಟಡ ರಾಮು ಅಯ್ಯಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಒಂದೇ ನಮ್ಮೆಲ್ಲರ ಆಸ್ತಿ ಡಾ. ಬಿ.ಅರ್. ಅಂಬೇಡ್ಕರ್ ಅವರು ಶೋಷಿತ ಸಮುದಾಯಗಳಿಗೆ ನೀಡಿದಂತಹ ಶಿಕ್ಷಣ ಮತ್ತು ಮಾರ್ಗದರ್ಶನವನ್ನು ನಾವೆಲ್ಲರು ಪಡೆದುಕೊಂಡು ವಿದ್ಯಾವಂತರಾಗಿ ಶಿಕ್ಷಿತ ಸಮಾಜವನ್ನು ನಿರ್ಮಾಣ ಮಾಡಲು ಪಣತೊಡಬೇಕು ಎಂದು ಹೇಳಿದರು.

ತರಬೇತಿ ಶಿಬಿರದಲ್ಲಿ ಸ್ಪರ್ಧಾ ಆಕಾಂಕ್ಷಿಗಳಿಗೆ ಭಾರತದ ಇತಿಹಾಸ, ಭಾರತದ ಅರ್ಥವ್ಯವಸ್ಥೆ, ಕರ್ನಾಟಕ ಆರ್ಥಿಕ ಸಮೀಕ್ಷೆ, ಸಾಮಾನ್ಯ ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಮುಂತಾದ ವಿಷಯಗಳ ಬಗ್ಗೆ ನುರಿತ ಪ್ರಾಧ್ಯಾಪಕರುಗಳಾದ ಗಂಗಾಧರ್, ಜಿ.ಎಸ್. ಕೃಷ್ಣಮೂರ್ತಿ, ಆರ್. ಮಂಜುನಾಥ್ ಮತ್ತು ಶಿವಕುಮಾರ್ ಅವರುಗಳು ಉಪನ್ಯಾಸ ನೀಡಿದರು.

ದೊಡ್ಡಕುಟ್ಟಡ ಪ್ರತಿಮಾ ರಾಮು ಪ್ರಾರ್ಥಿಸಿ, ಸಮಾಜದ ಪ್ರಧಾನ ಕಾರ್ಯದರ್ಶಿಗಳಾದ ಮೊಳ್ಳೆಕುಟ್ಟಡ ದಿನು ಬೋಜಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಶಿಬಿರದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸುಮಾರು ೬೦ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಸೇರಿದಂತೆ ಸಮಾಜದ ಮುಖಂಡರಾದ ಜಟ್ಟಕುಟ್ಟಡ ಅನಂತ್ ಸುಬ್ಬಯ್ಯ ಮತ್ತು ಜನಾಂಗ ಬಾಂಧವರು ಹಾಜರಿದ್ದರು.