ಮಡಿಕೇರಿ, ಜ. ೫ : ಮದೆ ಗ್ರಾಮದ ಬೆಟ್ಟತ್ತೂರು ನಿವಾಸಿ ಕೃಷಿಕ ಶಿವಪ್ರಸಾದ್ (೪೭) ಎಂಬವರು ಆನೆ ಧಾಳಿಗೆ ಬಲಿಯಾದ ಘಟನೆ ತಾ.೪ ರ ಸಂಜೆ ವೇಳೆ ಬೆಟ್ಟತ್ತೂರಿನಲ್ಲಿ ಸಂಭವಿಸಿದೆ . ಶಿವಪ್ರಸಾದ್ ಅವರ ಮನೆಗೆ ಪೈಪ್ ಮೂಲಕ ಸರಿಯಾಗಿ ನೀರು ಬರದಿದ್ದ ಕಾರಣ ತಮ್ಮ ಜಾಗದಲ್ಲಿನ ತೋಡಿನ ಬಳಿ ಪೈಪ್ ಸರಿಪಡಿಸಲೆಂದು ತಾ.೪ ರ ಸಂಜೆ, ಶಿವಪ್ರಸಾದ್ ಹಾಗೂ ಅವರ ನೆರೆಯ ನಿವಾಸಿ ಗೋಪಾಲ ಎಂಬವರು ತೆರಳಿದ್ದಾರೆ. ಪೈಪ್ ಸರಿಪಡಿಸಿ ಹಿಂತಿರುಗುತ್ತಿದ್ದ ವೇಳೆ ಕಾಡಾನೆಯೊಂದು ಇಬ್ಬರನ್ನು ಅಟ್ಟಿಸಿಕೊಂಡು ಬಂದಿದೆ. ಗೋಪಾಲ ಅವರು ಓಡಿ ತಪ್ಪಿಸಿಕೊಂಡರೆ, ಶಿವಪ್ರಸಾದ್ ಅವರು ಈ ಹಿಂದೆ ಮರದಿಂದ ಬಿದ್ದು ಕಾಲು ಸ್ವಲ್ಪ ಕುಂಟುತ್ತಿದ್ದ ಕಾರಣ ವೇಗವಾಗಿ ಓಡಲು ವಿಫಲರಾಗಿದ್ದಾರೆ. ಆನೆಯಿಂದ ತಪ್ಪಿಸಿಕೊಂಡ ಗೋಪಾಲ, ಶಿವಪ್ರಸಾದ್ ಅವರ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಅಷ್ಟರಲ್ಲಿ ಆಗಲೇ ಕತ್ತಲಾವರಿಸಿದ್ದ ಕಾರಣ ಶಿವಪ್ರಸಾದ್ ಅವರನ್ನು ಹುಡುಕುವ ಕಾರ್ಯಕ್ಕೆ ಮನೆಯವರು ಮುಂದಾಗಿಲ್ಲ. ನೆಟ್ವರ್ಕ್ ಸಮಸ್ಯೆಯಿಂದಾಗಿ ಅರಣ್ಯ ಇಲಾಖೆಯವರಿಗೆ ಘಟನೆ ನಡೆದ ದಿನ ಮಾಹಿತಿ ನೀಡಲೂ ಸಾಧ್ಯವಾಗಿಲ್ಲ. ತಾ.೫ ರಂದು ಬೆಳಿಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಬಳಿಕ, ಇಲಾಖಾ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿದ ನಂತರ ಆನೆ ತುಳಿತಕ್ಕೆ ಒಳಗಾಗಿ ಅಸುನೀಗಿದ್ದ ಶಿವಪ್ರಸಾದ್ ಅವರ ಮೃತದೇಹ ಪತ್ತೆಯಾಗಿದೆ.

ಸಂಪಾಜೆ ವಲಯ ಅರಣ್ಯಾಧಿಕಾರಿ ಮಧುಸೂದನ್ ಹಾಗೂ ಸಿಬ್ಬಂದಿ ಸೇರಿದಂತೆ ಮದೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಾವತಿ ಆನಂದ್, ಅಭಿವೃದ್ಧಿ ಅಧಿಕಾರಿ ನಂಜುAಡ ಸ್ವಾಮಿ, ಸದಸ್ಯ ಸೈಯದ್ ಅಲವಿ, ಪೊಲೀಸ್ ಸಬ್‌ಇನ್ಸ್ಪೆಕ್ಟರ್ ದೇವರಾಜು, ಸಿಬ್ಬಂದಿ ದಿನೇಶ್ ಸೇರಿದಂತೆ ಗ್ರಾಮಸ್ಥರ ಸಮ್ಮುಖದಲ್ಲಿ ಮಹಜರು ನಡೆಸಿದರು . ಈ ವೇಳೆ ಮಾತನಾಡಿದ ವಲಯ ಅರಣ್ಯಾಧಿಕಾರಿ ಮಧುಸೂದನ್ ಅವರು ಅರಣ್ಯ ಇಲಾಖೆಯಿಂದ ರೂ.೭.೫ ಲಕ್ಷ ಪರಿಹಾರ ಒದಗಿಸುವ ಭರವಸೆ ನೀಡಿದರು. ಮೃತರ ಶವ ಸಂಸ್ಕಾರಕ್ಕೆ ರೂ. ೧೦ ಸಾವಿರವನ್ನು ಸ್ಥಳದಲ್ಲೇ ನೀಡಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಾವತಿ ಅವರು ಮಾತನಾಡಿ ಬೆಟ್ಟತ್ತೂರಿನಲ್ಲಿ ದಿನನಿತ್ಯ ಆನೆ ಹಾವಳಿಯಿಂದ ಭತ್ತದ ಬೆಳೆ ಹಾಗೂ ಇನ್ನಿತರ ಬೆಳೆಗಳು ನಾಶವಾಗುತ್ತಿದ್ದು ಇಲ್ಲಿನ ನಿವಾಸಿಗಳು ಆತಂಕದಲ್ಲಿರುವುದಾಗಿ ಮಾಹಿತಿ ನೀಡಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮಡಿಕೇರಿಗೆ ಕಳುಹಿಸಲಾಯಿತು.

ಮೃತ ಶಿವಪ್ರಸಾದ್ ಮೂಲತಃ ಪೆರಾಜೆ ಗ್ರಾಮದವರಾಗಿದ್ದು, ೧೫ ವರ್ಷಗಳಿಂದ ಬೆಟ್ಟತ್ತೂರಿನಲ್ಲಿ ಕೃಷಿ ಮಾಡಿ ಜೀವನ ಸಾಗಿಸುತ್ತಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

- ಇಬ್ರಾಹಿಂ ಮದೆನಾಡು