ಮಡಿಕೇರಿ, ಜ. ೫: ಕಾಂಗ್ರೆಸ್‌ನ ಭದ್ರಕೋಟೆ ಯಾಗಿದ್ದ ಕೊಡಗು ಜಿಲ್ಲೆ ಸುಮಾರು ೨೦ ವರ್ಷಗಳಿಂದ ಬಿಜೆಪಿಯ ನೆಲೆಯಾಗಿದ್ದು, ಕಾಂಗ್ರೆಸ್ ಪಕ್ಷದಲ್ಲಿ ದಲಿತ ಮತದಾರರನ್ನು ಕಡೆಗಣಿಸುತ್ತಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಂ.ಎಸ್. ವೀರೇಂದ್ರ ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಸುಮಾರು ೧.೨೫ ಲಕ್ಷಕ್ಕೂ ಅಧಿಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತದಾರರಿದ್ದು, ಅವರಲ್ಲಿ ಪರಿಶಿಷ್ಟ ಜಾತಿಯ ಸುಮಾರು ೮೦ ಸಾವಿರÀ ಮತದಾರರಿದ್ದಾರೆ. ಆದರೆ ಇಂದು ಪಕ್ಷದಲ್ಲಿ ದಲಿತ ಮತದಾರರಿಗೆ ಸೂಕ್ತ ಸ್ಥಾನಮಾನ, ಆಯಾಕಟ್ಟಿನ ಹುದ್ದೆ, ಗೌರವ ನೀಡದೇ ಇರುವುದು ದುರಾದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬೂತ್ ಮಟ್ಟದಲ್ಲಿ ದಲಿತ ಕಾರ್ಯಕರ್ತರನ್ನು ಭೇಟಿ ಮಾಡಿ ಸಂವಾದ ನಡೆಸಿದಾಗ ಕೊಡಗಿನಲ್ಲಿ ದಲಿತರನ್ನು ಪಕ್ಷದಲ್ಲಿ ಕಡೆಗಣಿಸುತ್ತಿರುವ ಮಾಹಿತಿ ಲಭ್ಯವಾಗಿದೆ.

ಸ್ಥಳೀಯ ಚುನಾವಣೆಯಿಂದ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲೂ ಪರಿಶಿಷ್ಟರ ಮತಗಳು ಸೋಲು, ಗೆಲುವಿಗೆ ನಿರ್ಣಾಯಕವೆನಿಸಿದೆ. ಇತ್ತೀಚೆಗೆ ಮೇಕೆದಾಟು ವಿಚಾರವಾಗಿ ನಗರದ ಕ್ರಿಸ್ಟಲ್ ಹಾಲ್ ಸಭಾಂಗಣದಲ್ಲಿ ನಡೆದ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾರ್ಯಧ್ಯಕ್ಷ ಆರ್. ಧ್ರುವ ನಾರಾಯಣ್ ಅವರ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಪರಿಶಿಷ್ಟರಿಗೆ ಸ್ಥಾನ ನೀಡಿರಲಿಲ್ಲ, ಪರಿಶಿಷ್ಟ ಘಟಕದ ಜಿಲ್ಲಾಧ್ಯಕ್ಷರೂ ಇರಲಿಲ್ಲ. ಅಲ್ಲದೆ ಯಾವೊಬ್ಬ ಪರಿಶಿಷ್ಟ ನಾಯಕರ ಹೆಸರು ಕೇಳಿ ಬರಲಿಲ್ಲ. ಇದು ಕಾಂಗ್ರೆಸ್ ನಮ್ಮನ್ನು ಯಾವ ಮಟ್ಟಿಗೆ ನಡೆಸಿಕೊಳ್ಳುತ್ತಿದೆ ಎನ್ನುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ.

ಯಾವುದೇ ಪ್ರತಿಭಟನೆ, ಚಳುವಳಿ, ಸಭೆ ಸಮಾರಂಭಗಳಿಗೆ ಪಕ್ಷ ನಮ್ಮೊಂದಿಗೆ ಕೈ ಜೋಡಿಸುವುದಿಲ್ಲ, ಸಹಾಯ, ಸಹಕಾರವನ್ನೂ ನೀಡುವುದಿಲ್ಲ. ಈ ಎಲ್ಲಾ ವಿಷಯಗಳಿಂದ ಬೇಸತ್ತು ದಲಿತ ಮತಗಳು ಹಂಚಿ ಹೋಗುತ್ತಿರುವುದರಿಂದ ಕಾಂಗ್ರೆಸ್ ಪಕ್ಷ ಕೊಡಗಿನಲ್ಲಿ ನೆಲೆ ಕಳೆದುಕೊಳ್ಳಲು ಕಾರಣವಾಗಿದೆ ಎಂದು ವೀರೇಂದ್ರ ಆರೋಪಿಸಿದ್ದಾರೆ.

ಕಾಂಗ್ರೆಸ್ ಮೇಲೆ ದಲಿತರಿಗೆ ಅಪಾರ ಗೌರವ, ಅಭಿಮಾನ, ನಂಬಿಕೆ ಇದೆ. ಇದಕ್ಕೆ ಪಕ್ಷದ ನಾಯಕರು ಬದ್ಧರಾಗಿರಬೇಕು, ಮುಂದಿನ ತಾ.ಪಂ ಮತ್ತು ಜಿ.ಪಂ. ಚುನಾವಣೆ ವೇಳೆಗೆ ಪರಿಸ್ಥಿತಿ ಸುಧಾರಣೆ ಯಾಗದಿದ್ದಲ್ಲಿ ಮತ್ತು ದಲಿತರ ಕಾರ್ಯಕ್ರಮ, ಪ್ರತಿಭಟನೆಗಳಿಗೆ ಸ್ಪಂದಿಸದಿದ್ದಲ್ಲಿ ಪಕ್ಷ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ವೀರೇಂದ್ರ ತಿಳಿಸಿದ್ದಾರೆ.