ಗೋಣಿಕೊಪ್ಪಲು, ಜ. ೫: ಗ್ರಾಮೀಣ ಭಾಗದ ಜನರಿಗೆ ಸರ್ಕಾರದ ಸವಲತ್ತುಗಳು ಹಾಗೂ ಪ್ರಯೋಜನಗಳು ಸಕಾಲದಲ್ಲಿ ತಲುಪಲು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಕ್ರಿಯಾಶೀಲರಾಗಿದ್ದರೆ ಮಾತ್ರ ಸಾಧ್ಯ ಎಂದು ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಹಾತೂರು ಗ್ರಾ.ಪಂ.ಯಲ್ಲಿ ಉದ್ಯಾನ ಹಾಗೂ ಸ್ವಚ್ಛತಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಇವರು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಪಂಚಾಯಿತಿ ಮಾದರಿಯಾಗಿದೆ. ಇನ್ನೂ ಕೂಡ ಜನರಿಗೆ ಸೇವೆ ಸಿಗುವಂತೆ ಉತ್ತಮ ಕೆಲಸ ನಿರ್ವಹಿಸುವಂತೆ ಆಡಳಿತ ಮಂಡಳಿಗೆ ಸಲಹೆ ನೀಡಿದರು.
ಸ್ವಚ್ಛತಾ ಕೆಲಸಕ್ಕೆ ಆದ್ಯತೆ ನೀಡಿರುವ ಪಂಚಾಯಿತಿ, ಕಚೇರಿಯ ಸಮೀಪವೇ ರೂ. ೧೩ ಲಕ್ಷದ ವೆಚ್ಚದಲ್ಲಿ ಘಟಕ ನಿರ್ಮಿಸಿದೆ. ತಾಲೂಕಿನ ವಿವಿಧ ಪಂಚಾಯಿತಿಗಳಿಗೆ ಈ ಘಟಕ ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಪ್ಪಂಡ ಗಿರೀಶ್ ಪೂವಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಇರುವ ಜಾಗದಲ್ಲೇ ಉತ್ತಮ ಸ್ವಚ್ಛತಾ ಘಟಕ, ಉದ್ಯಾನ, ಸಭಾಂಗಣವನ್ನು ನಿರ್ಮಿಸಲಾಗಿದೆ.
ಇನ್ನೂ ಹಲವಾರು ಅಭಿವೃದ್ಧಿ ಕೆಲಸಗಳನ್ನು ಪಂಚಾಯಿತಿ ವ್ಯಾಪ್ತಿಯ ೭ ವಾರ್ಡ್ಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಶಾಸಕರ ವಿಶೇಷ ಅನುದಾನ ಹಾಗೂ ಸಹಕಾರ ನಿರೀಕ್ಷಿಸಲಾಗಿದೆ. ಪಂಚಾಯಿತಿ ಸದಸ್ಯರ ಸಹಕಾರದಿಂದ ಇಷ್ಟೊಂದು ಪ್ರಮಾಣದಲ್ಲಿ ಅಭಿವೃದ್ಧಿ ಕಾಣಲು ಸಹಕಾರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಅಕ್ರಮ ಸಕ್ರಮ ಸಮಿತಿಯ ತಾಲೂಕು ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ತಾ.ಪಂ. ಇಒ ಕೊಣಿಯಂಡ ಅಪ್ಪಣ್ಣ, ಗ್ರಾ.ಪಂ. ಉಪಾಧ್ಯಕ್ಷೆ ಸುಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಚಾಯಿತಿ ಪಿಡಿಒ ಉಜ್ಮ ಜಬೀನ್ ವಂದಿಸಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯರಾದ ಎಂ.ಎಸ್. ಕುಟ್ಟಪ್ಪ, ಕುಲ್ಲಚಂಡ ಚಿಣ್ಣಪ್ಪ, ಕೊಕ್ಕಂಡ ಗಣಪತಿ, ಜೆ.ಟಿ. ಭೀಮಯ್ಯ, ಗುಮ್ಮಟೀರ ದರ್ಶನ್ ನಂಜಪ್ಪ, ನಮೀತ, ಪೊನ್ನಮ್ಮ, ಮುತ್ತುರಾಜ್, ಪಿ.ಎಂ. ರತಿ, ಸುಮಿತ್ರ, ರೇಖಾ ಮಹೇಶ್, ಮ್ಯಾಥ್ಯೂ, ವಿಷ್ಮಾ, ಶ್ವೇತ, ಸಣ್ಣುವಂಡ ಅಕ್ಕಮ್ಮ, ಸುನೀತ ಸೇರಿದಂತೆ ಸಬ್ ಇನ್ಸ್ಪೆಕ್ಟರ್ ಸುಬ್ಬಯ್ಯ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ ಹಾಗೂ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.