ಸೋಮವಾರಪೇಟೆ,ಜ.೩: ಕೋವಿಡ್ ವೈರಸ್ ವಿರುದ್ಧದ ಹೋರಾಟದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ಸರ್ಕಾರ ಉಚಿತವಾಗಿ ಲಸಿಕೆಗಳನ್ನು ನೀಡುತ್ತಿದ್ದು, ೧೫ ವರ್ಷ ಮೇಲ್ಪಟ್ಟ ಎಲ್ಲಾ ಮಕ್ಕಳೂ ಸಹ ಲಸಿಕೆ ಪಡೆಯಬೇಕು. ಈ ನಿಟ್ಟಿನಲ್ಲಿ ಪೋಷಕರು ಹಾಗೂ ಉಪನ್ಯಾಸಕ ವೃಂದ ಗಮನಹರಿಸಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಕರೆ ನೀಡಿದರು.

ಇಂದಿನಿAದ ಆರಂಭವಾದ ೧೫ ವರ್ಷ ಮೇಲ್ಪಟ್ಟು ೧೮ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ಮತ್ತೆ ಕೊರೊನಾ ಆತಂಕ ಕಂಡುಬರುತ್ತಿದೆ. ಪ್ರಥಮ ಹಾಗೂ ದ್ವಿತೀಯ ಹಂತದ ಲಸಿಕಾಕರಣದ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಶೇ.೧೦೦ರಷ್ಟು ಸಾಧನೆಯಾಗಿಲ್ಲ. ಸರ್ಕಾರ ಉಚಿತವಾಗಿ ಲಸಿಕೆ ನೀಡಲು ಮುಂದಾಗಿದ್ದರೂ ಸಹ ಜನಸಾಮಾನ್ಯರು ಲಸಿಕೆಯಿಂದ ದೂರ ಉಳಿಯುತ್ತಿರುವುದು ದುರಂತ ಎಂದರು.

೧೩೦ ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಎಲ್ಲರಿಗೂ ಉಚಿತವಾಗಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೇರಿಕಾದಲ್ಲಿ ಕೊರೊನಾ ಪರೀಕ್ಷೆಗೆ ಭಾರತದ ರೂಪಾಯಿ ೧೨ ಸಾವಿರ ಖರ್ಚಾಗಲಿದೆ ಎಂದು ರಂಜನ್ ಹೇಳಿದರು.

ದೇಶದಲ್ಲಿ ಕೋವಿಡ್ ನಿಗ್ರಹ ಹಾಗೂ ಹತೋಟಿಗೆ ಕೇಂದ್ರ ಸರ್ಕಾರ ಹಲವು ದಿಟ್ಟ ಕ್ರಮಗಳನ್ನು ಕೈಗೊಂಡಿದೆ. ಜನಸಾಮಾನ್ಯರು ಸರ್ಕಾರ ಹಾಗೂ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು. ಇದೀಗ ೧೫ ರಿಂದ ೧೮ ವರ್ಷದೊಳಗಿನ ಮಕ್ಕಳಿಗೆ ಉಚಿತ ಲಸಿಕೆ ನೀಡಲಾಗುತ್ತಿದ್ದು, ಯಾರೊಬ್ಬರೂ ಇದರಿಂದ ವಂಚಿತರಾಗಬಾರದು ಎಂದು ಶಾಸಕರು ಕರೆ ನೀಡಿದರು.

ಜಿಲ್ಲೆಯಲ್ಲಿ ೩೦ ಸಾವಿರಕ್ಕೂ ಅಧಿಕ ಮಕ್ಕಳಿಗೆ ಲಸಿಕೆ ನೀಡಲು ಉದ್ದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ ೬೦ ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡಲು ಸಿದ್ಧತೆ ನಡೆದಿದೆ. ಕೊರೊನಾದಿಂದಾಗಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೂ ಕೇಂದ್ರ ಸರ್ಕಾರ ಜನರ ಆರೋಗ್ಯ ರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸಿದೆ ಎಂದು ಶಾಸಕರು ತಿಳಿಸಿದರು. ತಾಲೂಕಿನ ಮಾದಾಪುರ ಮೊರಾರ್ಜಿ ವಸತಿ ಶಾಲೆ, ಮಾದಾಪುರ ಚೆನ್ನಮ್ಮ ಕಾಲೇಜು, ಪಟ್ಟಣದ ಸಂತ ಜೋಸೆಫರ ಕಾಲೇಜು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಲಸಿಕಾ ಅಭಿಯಾನದಲ್ಲಿ ಭಾಗವಹಿಸಿದ ಅಪ್ಪಚ್ಚುರಂಜನ್, ವಿದ್ಯಾರ್ಥಿಗಳಲ್ಲಿ ಕೊರೊನಾ ಲಸಿಕೆಯ ಬಗ್ಗೆ ಜಾಗೃತಿ ಮೂಡಿಸಿದರು.

ಜೂನಿಯರ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ಚೌಡ್ಲು ಗ್ರಾ.ಪಂ. ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಉಪಾಧ್ಯಕ್ಷೆ ಮಂಜುಳಾ ಸುಬ್ರಮಣಿ, ತಾ.ಪಂ. ಮಾಜೀ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಪ್ರಾಂಶುಪಾಲ ಬೆಳ್ಳಿಯಪ್ಪ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.