ಮಡಿಕೇರಿ, ಜ. ೩: ಜಿಲ್ಲಾ ದ.ಸಂ.ಸಮಿತಿ ವತಿಯಿಂದ ೨೦೪ನೇ ಭೀಮಾ ಕೋರೇಗಾಂವ್ ಕದನದ ವಿಜಯೋತ್ಸವವನ್ನು ನಗರದ ಸುದರ್ಶನ ವೃತ್ತದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಜೈಕಾರ ಹಾಕುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಗೌತಮ್‌ಶಿವಪ್ಪ ಮಾತನಾಡಿ ಪೇಶ್ವೆ ರಾಜ್ಯದಲ್ಲಿ ದಲಿತರ ಮೇಲೆ ನಡೆಸಿದ ದೌರ್ಜನ್ಯಕ್ಕೆ ಪ್ರತಿಯಾಗಿ ಐನೂರು ಜನ ಮಹಾ ಯೋಧರು ಮೂವತ್ತು ಸಾವಿರ ಜನರ ಪೇಶ್ವೆ ಸೈನಿಕರನ್ನು ಕೋರೇಗಾಂವ್ ಯುದ್ಧದಲ್ಲಿ ಮಣಿಸಿ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಮಹಾರ್ ಸೈನಿಕರನ್ನು ನೆನೆದರು.
ದ.ಸಂ.ಸಮಿತಿಯ ತಾಲೂಕು ಸಂಚಾಲಕ ದೀಪಕ್‌ಪೊನ್ನಪ್ಪ ಮಾತನಾಡಿ, ಭಾರತ ದೇಶದಲ್ಲಿ ನಡೆದ ಎಲ್ಲಾ ಯುದ್ಧಗಳಿಗಿಂತ ಕೋರೇಗಾಂವ್ ಕದನ ವಿಭಿನ್ನವಾಗಿದ್ದು ಈ ಕದನವು ಸ್ವಾಭಿಮಾನಕ್ಕಾಗಿ ಅನ್ಯಾಯದ ವಿರುದ್ಧ ಅಸಮಾನತೆಯ ವಿರುದ್ಧ ಜಾತಿ ಪದ್ಧತಿಯ ವಿರುದ್ಧ ನಡೆದಿದ್ದು ಈ ಯುದ್ಧದ ನಂತರ ಜೈ ಭೀಮ್ ಅನ್ನುವ ಘೋಷಣೆ ಮೊಳಗಿತು ಎಂದರು. ಸಂವಿಧಾನದ ಕೊಡುಗೆಯಿಂದ ದಲಿತರು ಪ್ರಗತಿಯತ್ತ ಸಾಗುತ್ತಿದ್ದು, ಸಂವಿಧಾನಕ್ಕೆ ಅಪಮಾನವೆಸಗುವ ಸಂದರ್ಭ ಬಂದರೆ ಮತ್ತೊಂದು ಕೋರೇಗಾಂವ್ ಕದನದ ಅವಶ್ಯಕತೆ ಇದೆ ಎಂದು ತಿಳಿಸುತ್ತಾ ಇತಿಹಾಸದ ಪುಟಗಳಲ್ಲಿ ಈ ಕದನವನ್ನು ಮರೆಮಾಚಿದ್ದು, ಇದನ್ನು ಜಿಲ್ಲಾಧಿಕಾರಿಗಳ ಮೂಲಕ ಶಿಕ್ಷಣ ಮಂತ್ರಿಗಳಿಗೆ ಪ್ರಾಥಮಿಕ ಶಿಕ್ಷಣದಲ್ಲಿ ಈ ವಿಷಯವಾಗಿ ಪಾಠವನ್ನು ಸೇರ್ಪಡೆಮಾಡಲು ಮನವಿ ಮಾಡುವುದಾಗಿ ಹೇಳಿದರು.
ಜಿಲ್ಲಾ ಸಂಚಾಲಕ ದಿವಾಕರ್ ಹೆಚ್.ಎಲ್. ಮಾತನಾಡಿ, ಬಹುಸಂಖ್ಯಾತರಾದ ದಲಿತ ಬಾಂಧವರು ನಮ್ಮ ಇತಿಹಾಸ ತಿಳಿಯದೇ ಮುಂದೆ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲವೆನ್ನುತ್ತಾ ಮುಂದಿನ ದಿನಗಳಲ್ಲಿ ದಲಿತ ಚರಿತ್ರೆಯ ವಿಷಯದಲ್ಲಿ ತರಬೇತಿ ನೀಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸುವ ಮೂಲಕ ನೆರೆದಂತಹ ಬಂಧುಗಳಿಗೆ ಸಿಹಿ ಹಂಚಲಾಯಿತು. ದ.ಸಂ.ಸಮಿತಿಯ ನಗರ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.