ಸೋಮವಾರಪೇಟೆ, ಜ.೩: ಕೊರೊನಾ ವೈರಸ್ ಸೋಂಕಿಗೆ ಬಲಿಯಾದ ಮಂದಿಯ ಕುಟುಂಬಕ್ಕೆ ಸರ್ಕಾರ ಘೋಷಿಸಿರುವ ಪರಿಹಾರ ಧನದ ಚೆಕ್‌ನ್ನು ಶಾಸಕ ಎಂಪಿ. ಅಪ್ಪಚ್ಚುರಂಜನ್ ಅವರು ವಿತರಿಸಿದರು.

ಇಲ್ಲಿನ ಶಾಸಕರ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೋಮವಾರಪೇಟೆ ತಾಲೂಕಿನ ೨೪ ಹಾಗೂ ಕುಶಾಲನಗರದ ೧೬ ಕುಟುಂಬಗಳಿಗೆ ತಲಾ ೧ ಲಕ್ಷ ಮೌಲ್ಯದ ಚೆಕ್‌ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ರಂಜನ್, ಕೋವಿಡ್‌ಗೆ ಬಲಿಯಾದ ಮಂದಿಯ ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸುವ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಹಾರ ಘೋಷಿಸಿದ್ದು, ಬಿಪಿಎಲ್ ಕುಟುಂಬಕ್ಕೆ ರೂ. ೧.೫೦ ಲಕ್ಷ ಹಾಗೂ ಎಪಿಎಲ್ ಕುಟುಂಬಕ್ಕೆ ೫೦ ಸಾವಿರ ಪರಿಹಾರ ನೀಡಲಾಗುತ್ತಿದೆ. ಈಗಾಗಲೇ ೫೦ ಸಾವಿರ ರೂಪಾಯಿ ನೇರವಾಗಿ ಕುಟುಂಬದವರ ಖಾತೆಗೆ ಜಮೆ ಮಾಡಲಾಗಿದೆ ಎಂದರು.

ಮನುಷ್ಯನ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಜೀವವಿದ್ದರೆ ಮಾತ್ರ ಜೀವನ. ಈ ನಿಟ್ಟಿನಲ್ಲಿ ಕೋವಿಡ್ ಎಲ್ಲರಿಗೂ ಜೀವನದ ಪಾಠ ಕಲಿಸಿದೆ. ಈ ಹಿನ್ನೆಲೆ ಸಾರ್ವಜನಿಕರು ಕೊರೊನಾ ಸಂಬAಧಿತ ಸರ್ಕಾರ ಹೊರಡಿಸುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತಮ್ಮ ಜೀವದೊಂದಿಗೆ ಇತರರ ಜೀವ ಉಳಿಸಲು ಮುಂದಾಗಬೇಕೆAದು ಮನವಿ ಮಾಡಿದರು.

ಇದರೊಂದಿಗೆ ಕೊಡಗು ಜಿಲ್ಲೆಯ ಸಣ್ಣ ಬೆಳೆಗಾರರು ಕೃಷಿ ಕಾರ್ಯಕ್ಕೆ ಬಳಸುತ್ತಿರುವ ೧೦ ಹೆಚ್.ಪಿ.ವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸುವಂತೆ ತಾನೂ ಸೇರಿದಂತೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರುಗಳು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಈ ಬಗ್ಗೆ ಶೀಘ್ರದಲ್ಲೇ ಆದೇಶ ಹೊರಬರಲಿದೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಮುಖ್ಯಾಧಿಕಾರಿ ನಾಚಪ್ಪ, ತಾಲೂಕು ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.