ಗೋಣಿಕೊಪ್ಪಲು, ಜ. ೩: ರೈತರ ಕಾಫಿ ಸೇರಿದಂತೆ ಅನೇಕ ಬೆಳೆಗಳಿಗೆ ಮಳೆಯಿಂದ ಹಾನಿಯಾಗಿ ನಷ್ಟ ಸಂಭವಿಸಿದೆ. ಇದಕ್ಕೆ ಪರಿಹಾರ ನೀಡುವಲ್ಲಿ ಕಾಫಿ ಬೋರ್ಡ್ ಅಧಿಕಾರಿಗಳು ಇಬ್ಬಗೆಯ ನೀತಿ ಅನುಸರಿಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕ ವತಿಯಿಂದ ಕಾಫಿ ಬೋರ್ಡ್ ಕಚೇರಿಯ ಮುಂದೆ ರೈತ ಸಂಘದ ಮುಖಂಡರು ಹಾಗೂ ಸದಸ್ಯರು ದಿಢೀರ್ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾ ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಹಾಗೂ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಮುಂದಾಳತ್ವದಲ್ಲಿ ಅರುವತ್ತೊಕ್ಕಲು ಗ್ರಾಮದ ಕಾಫಿ ಬೋರ್ಡ್ ಕಚೇರಿಗೆ ತೆರಳಿದ ನೂರಾರು ರೈತರು ಬೆಳೆ ಪರಿಹಾರ ವಿತರಣೆಯಲ್ಲಿ ಅಧಿಕಾರಿಗಳ ನೀತಿಯನ್ನು ಖಂಡಿಸಿ ಕಚೇರಿಯ ಮುಂದೆ ಪ್ರತಿಭಟಿಸಿದರು.
ಅತಿವೃಷ್ಟಿ ಹಿನ್ನೆಲೆಯಲ್ಲಿ ಜಿಲ್ಲೆಯ ಕಾಫಿ ಸೇರಿದಂತೆ ಅಡಿಕೆ, ಭತ್ತ, ಕರಿಮೆಣಸು ಇತ್ಯಾದಿ ಬೆಳೆಗಳಿಗೆ ಅಪಾರ ನಷ್ಟ ಸಂಭವಿಸಿ ರೈತ ಸಂಕಷ್ಟಕ್ಕೆ ಸಿಲುಕಿರುವುದನ್ನು ಮನಗಂಡ ಸರ್ಕಾರ ಜಿಲ್ಲೆಯ ರೈತರಿಗೆ ಪರಿಹಾರ ಘೋಷಣೆ ಮಾಡಿತ್ತು.
ಆದರೆ ಬೆಳೆ ಪರಿಹಾರ ವಿತರಣೆಯಲ್ಲಿ ಭಾರತ ಕಾಫಿ ಮಂಡಳಿ ಏಕಪಕ್ಷೀಯವಾಗಿ ನಡೆದುಕೊಳ್ಳುವ ಮೂಲಕ ಪರಿಹಾರ ವಿತರಣೆಗೆ ಕೆಲವು ಗ್ರಾಮಗಳನ್ನು ಮಾತ್ರ ಸೇರಿಸಿ ವರದಿ ನೀಡಿದೆ ಇದರಿಂದ ಜಿಲ್ಲೆಯ ಸಾವಿರಾರು ರೈತರಿಗೆ ಅನ್ಯಾಯವಾಗಿದೆ.
ಜಿಲ್ಲೆಯ ಎಲ್ಲಾ ರೈತರನ್ನು ಹಾಗೂ ಗ್ರಾಮಗಳನ್ನು ಪಟ್ಟಿಗೆ ಸೇರಿಸುವಲ್ಲಿ ಕಾಫಿ ಬೋರ್ಡ್ ಅಧಿಕಾರಿಗಳು ಇಬ್ಬಗೆಯ ನೀತಿ ಅನುಸರಿದ ಹಿನ್ನೆಲೆಯಲ್ಲಿ ಇಂತಹ ಸಮಸ್ಯೆ ಎದುರಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಜಿಲ್ಲೆಯ ಎಲ್ಲಾ ರೈತರನ್ನು ಪರಿಹಾರಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿದರು. ಚೆಟ್ರುಮಾಡ ಸುಜಯ್ ಬೋಪಯ್ಯ ಹಾಗೂ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಪ್ಪನ್ನು ಸರಿ ಪಡಿಸುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ವಕೀಲ ಹೇಮಚಂದ್ರ ಅವರು ಸರ್ಕಾರ ಬಿಡುಗಡೆಗೊಳಿಸುವ ಪರಿಹಾರವನ್ನು ರೈತರಿಗೆ ನೀಡುವ ವೇಳೆ ಕಾಫಿ ಮಂಡಳಿಯ ಅಧಿಕಾರಿಗಳು ಕಚೇರಿಯಲ್ಲಿಯೇ ಕುಳಿತು ಅಂದಾಜು ಪಟ್ಟಿ ತಯಾರಿಸಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಅಧಿಕಾರಿಗಳಿಂದ ಸಮಸ್ಯೆ ಉಲ್ಬಣಗೊಂಡಿದೆ, ಕೇವಲ ಕೆಲವು ಗ್ರಾಮಗಳನ್ನು ಮಾತ್ರ ಸೇರಿಸಿ ಬೆಳೆ ನಷ್ಟ ಸಂಭವಿಸಿದೆ ಎಂದು ಸರ್ಕಾರಕ್ಕೆ ವರದಿ ನೀಡಿದ್ದಾರೆ ಇದರಿಂದ ಕೊಡಗಿನ ರೈತರು ಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ವರದಿಯನ್ನು ಮತ್ತೆ ಪರಿಷ್ಕರಿಸಿ ಎಲ್ಲಾ ರೈತರಿಗೆ ಪರಿಹಾರ ಒದಗಿಸುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳನ್ನು ಆಗ್ರಹಿಸಿದರು.
ಭಾರತ ಕಾಫಿ ಮಂಡಳಿಯ ಹಿರಿಯ ವಿಸ್ತಾರಣಾಧಿಕಾರಿ ಡಾ.ಶ್ರೀದೇವಿ ರೈತ ಸಂಘದ ಮನವಿ ಸ್ವೀಕರಿಸಿ ಮಾತನಾಡಿ ಜಿಲ್ಲಾಧಿಕಾರಿ ಸೂಚನೆ ಮೇರೆ ಮೂರು ದಿನದಲ್ಲಿ ಸರ್ವೆ ಕಾರ್ಯ ನಡೆಸಲಾಗಿದೆ, ಕಂದಾಯ ಇಲಾಖೆ ಹಾಗೂ ಕಾಫಿ ಬೋರ್ಡ್ ಒಟ್ಟಾಗಿ ಸರ್ವೆ ಕಾರ್ಯ ನಡೆಸಿ ವರದಿ ನೀಡಲಾಗಿತ್ತು. ಇದೀಗ ಮತ್ತೊಮ್ಮೆ ವರದಿ ನೀಡುವ ಭರವಸೆ ನೀಡಿದರು.
ಪ್ರತಿಭಟನೆ ವೇಳೆ ಅಧಿಕಾರಿಗಳ ಹಾಗೂ ರೈತ ಮುಖಂಡರ ಮಧ್ಯೆ ವಾಗ್ವಾದ ನಡೆಯಿತು. ಈ ವೇಳೆ ಮಧ್ಯ ಪ್ರವೇಶಿಸಿದ ಪೊನ್ನಂಪೇಟೆ ನೂತನ ತಾಲೂಕು ತಹಶೀಲ್ದಾರ್ ಪ್ರಶಾಂತ್ ಅವರು ಎರಡು ದಿನಗಳ ಒಳಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು, ಯಾವುದೇ ರೈತ ಪರಿಹಾರದಿಂದ ವಂಚಿತರಾಗದAತೆ ಎಚ್ಚರಿಕೆ ವಹಿಸುತ್ತೇವೆ ಎಂದರಲ್ಲದೆ, ಪ್ರತಿಭಟನೆಯನ್ನು ಕೈ ಬಿಡುವಂತೆ ಮನವಿ ಮಾಡಿದರು. ತಹಶೀಲ್ದಾರ್ ಪ್ರಶಾಂತ್ ಅವರ ಮಾತಿಗೆ ಒಪ್ಪಿಗೆ ಸೂಚಿಸಿದ ರೈತ ಸಂಘದ ಪದಾಧಿಕಾರಿಗಳು ಏಳು ದಿನಗಳ ಗಡುವು ನೀಡಿದರು.
ಪ್ರತಿ ರೈತರಿಗೆ ೩೫ ಸಾವಿರಕ್ಕೂ ಹೆಚ್ಚಿನ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಹುದಿಕೇರಿ ಹೋಬಳಿ ಅಧ್ಯಕ್ಷ ಚಂಗುಲAಡ ಸೂರಜ್, ಶ್ರೀಮಂಗಲ ಹೋಬಳಿ ಅಧ್ಯಕ್ಷ ಚಟ್ಟಂಗಡ ಕಂಬ ಕಾರ್ಯಪ್ಪ, ಸಿದ್ದಾಪುರ ಅಧ್ಯಕ್ಷ ದೇವಣೀರ ವಜ್ರು ಬೋಪಣ್ಣ, ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಸೇರಿದಂತೆ ರೈತ ಸಂಘ ಮುಖಂಡರಾದ ಚೊಟ್ಟೆಕಾಳಪಂಡ ಮನು, ಎಸ್.ಎಸ್.ಸುರೇಶ್,ಕೋದೇಂಗಡ ಸುರೇಶ್, ಗಾಡಂಗಡ ಉತ್ತಯ್ಯ,ತೀತರಮಾಡ ರಾಜ, ಕವಿತ ರಾಮ್, ಮತ್ತಿತರರು ಪಾಲ್ಗೊಂಡಿದ್ದರು. ಕಂದಾಯ ಇಲಾಖೆಯ ಅಧಿಕಾರಿ ಸುಧೀಂದ್ರ ಹಾಗೂ ಇನ್ನಿತರ ಸಿಬ್ಬಂದಿಗಳು ಹಾಜರಿದ್ದರು.