ಗೋಣಿಕೊಪ್ಪ ವರದಿ, ಜ. ೩: ಶಿಕ್ಷಣದಲ್ಲಿ ಮಾತೃಭಾಷೆ ಪರಿಗಣಿಸುವುದರಿಂದ ಅಳಿವಿನಂಚಿನ ಭಾಷೆಯ ಪೋಷಣೆ ಕೂಡ ಸಾಧ್ಯವಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವೇದಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು. ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಲಯ ಸಭಾಂಗಣದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಉಪನ್ಯಾಸಕರಿಗೆ ಕೊಡವ ಪಾಠ ಪಡಿಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಣ್ಣ ಪ್ರಾಯದಲ್ಲಿ ಮಾತೃಭಾಷೆಯನ್ನು ಶಿಕ್ಷಣ ರೂಪದಲ್ಲಿ ನೀಡುವುದರಿಂದ ಅಳಿವಿನಂಚಿನ ಭಾಷೆ ಉಳಿಸಲು ಅವಕಾಶ ಕಲ್ಪಿಸಿದಂತಾಗಲಿದೆ. ಭಾಷೆಗೂ ಮಹತ್ವ ಬರಲಿದೆ ಎಂದರು. ಅಪ್ಪಚ್ಚಕವಿ ವಿದ್ಯಾಲಯ ಆಡಳಿತ ಮಂಡಳಿ ಅಧ್ಯಕ್ಷ ಮಂಡೆಚAಡ ದಿನೇಶ್ ಚಿಟ್ಯಪ್ಪ ಮಾತನಾಡಿ, ಕೊಡವ ಭಾಷೆಯ ಪಾಠದಿಂದ ಹಿರಿಯರು ಕೂಡ ಕಲಿಯಲು ಅವಕಾಶವಿದೆ. ಮೂಲ ಪದ ಬದಲಾಗದಂತೆ ಪೋಷಿಸಲು ಕೊಡವ ಭಾಷೆಯ ಪಾಠ ಹೆಚ್ಚು ಸಹಕಾರಿ ಎಂದರು. ಹಿರಿಯ ಸಾಹಿತಿಗಳಾದ ಬಾಚರಣಿಯಂಡ ಪಿ. ಅಪ್ಪಣ್ಣ, ನಾಗೇಶ್ ಕಾಲೂರು, ಕಾಳಿಮಾಡ ಮೋಟಯ್ಯ, ಅಕಾಡಮಿ ಸದಸ್ಯೆ ಡಾ. ಮುಲ್ಲೇಂಗಡ ರೇವತಿ ಪೂವಯ್ಯ ತರಬೇತಿ ನೀಡಿದರು. ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಸದಸ್ಯ ಪಡಿಞರಂಡ ಪ್ರಭುಕುಮಾರ್, ಅಖಿಲ ಅಮ್ಮಕೊಡವ ಸಮಾಜ ಅಧ್ಯಕ್ಷ ಬಾನಂಡ ಪ್ರತ್ಯು, ಸಮಾಜ ಸೇವಕ ಮಾಚಿಮಾಡ ರವೀಂದ್ರ ಇದ್ದರು.