ವೀರಾಜಪೇಟೆ, ಜ. ೩: ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸವಾರರಿಬ್ಬರು ಗಾಯಗೊಂಡ ಘಟನೆ ನಗರದಲ್ಲಿ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಗೋಣಿಕೊಪ್ಪಲು ನಿವಾಸಿ ಪ್ರದೀಪ್ ಕುಮಾರ್ (೩೮) ಹಾಗೂ ಪೊನ್ನಂಪೇಟೆ ಮಂದಣ್ಣ (೨೪) ಗಾಯಗೊಂಡವರು.
ಕಕ್ಕಬೆಯಿಂದ ಕೆಲಸ ಮುಗಿಸಿ ಬೈಕ್ನಲ್ಲಿ ಗೋಣಿಕೊಪ್ಪ ಕಡೆಗೆ ತೆರಳುತ್ತಿದ್ದ ಸಂದರ್ಭ ನಗರದ ಪಂಜರ್ಪೇಟೆ ತಿರುವಿನಲ್ಲಿ ಗೋಣಿಕೊಪ್ಪಲುನಿಂದ ವೀರಾಜಪೇಟೆ ನಗರದ ಕಡೆಗೆ ಆಗಮಿಸುತ್ತಿದ್ದ ಕಾರು ಬೈಕ್ಗೆ ಡಿಕ್ಕಿಪಡಿಸಿದೆ.
ಪರಿಣಾಮ ಪ್ರದೀಪ್ ಕುಮಾರ್ ಅವರಿಗೆ ತಲೆ, ಮುಖ ಹಾಗೂ ಕಾಲು ಭಾಗಕ್ಕೆ ಗಂಭೀರವಾದ ಗಾಯಗಳಾಗಿವೆ. ಹಿಂಬದಿ ಸವಾರ ಮಂದಣ್ಣ ಅವರಿಗೆ ಎರಡು ಕೈಗಳಿಗೆ ಹಾಗೂ ಮೈಭಾಗಕ್ಕೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಪ್ರದೀಪ್ ಅವರನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಮಂದಣ್ಣ ನೀಡಿರುವ ದೂರಿನ ಅನ್ವಯ ವೀರಾಜಪೇಟೆ ನಗರ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮಕೈಗೊಂಡಿದ್ದಾರೆ. -ಕಿಶೋರ್ ಕುಮಾರ್ ಶೆಟ್ಟಿ