ಮಡಿಕೇರಿ, ಜ. ೩: ಭಾಗಮಂಡಲ ಅರಣ್ಯ ವಲಯದ ತೊಡಿಕಾನ ಉಪವಲಯದ ನಿಶಾನೆ ಮೊಟ್ಟೆಯಲ್ಲಿ ಅಕ್ರಮವಾಗಿ ಹರಳು ಕಲ್ಲು ದಂಧೆಯಲ್ಲಿ ಭಾಗಿಯಾಗಿರುವ ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳುವಂತೆ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ತಾ.೨ ರಂದು ‘ಶಕ್ತಿ’ಯಲ್ಲಿ ನಿಶಾನೆ ಮೊಟ್ಟೆಯಲ್ಲಿ ಮತ್ತೇ ಅಕ್ರಮ ಹರಳು ಕಲ್ಲು ದಂಧೆ ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾದ ಬಗ್ಗೆ ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಸಚಿವರ ಗಮನ ಸೆಳೆದರು.
ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಈ ರೀತಿಯ ಅಕ್ರಮಗಳನ್ನು ಸಹಿಸುವುದಿಲ್ಲ. ಕಳೆದ ಹದಿನೈದು ವರ್ಷಗಳಿಂದ ಗಣಿಗಾರಿಕೆ ನಡೆಯುವ ಮಾಹಿತಿ ಇದ್ದು, ಇದನ್ನು ಖಾಯಂ ಆಗಿ ಸ್ಥಗಿತಗೊಳಿಸಲು ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ನಿರ್ದೇಶನ ನೀಡಬೇಕೆಂದರು. ಇದಕ್ಕೆ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವ ಶ್ರೀನಿವಾಸ್ ಪೂಜಾರಿ ಸರಕಾರ ಕೂಡ ಇಂತಹ ಘಟನೆ ಸಹಿಸುವುದಿಲ್ಲ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಶಾಮೀಲಾದವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಬಿ.ಸಿ. ಸತೀಶ ಅವರಿಗೆ ನಿರ್ದೇಶನ ನೀಡಿದರು.