ವಿಶ್ವದಾದ್ಯಂತ ಹೊಸ ವರ್ಷವಾದ ೨೦೨೨ ನ್ನು ಸ್ವಾಗತಿಸಲು ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ೨೦೨೧ ವರ್ಷ ಅಂತ್ಯವಾಗುತಿದೆ. ಹೊಸ ವರುಷದ ಸ್ವಾಗತದ ಜೊತೆಯಲ್ಲಿ ಈ ವರ್ಷವು ಜನರ ಬಾಳಿನಲ್ಲಿ ಹೊಸ ಬೆಳಕು ಹಾಗೂ ಭರವಸೆಯನ್ನು ಹೊತ್ತು ತರಲಿ ಎಂಬುವುದು ಸರ್ವರ ಆಶಯವಾಗಿದೆ. ವರುಷ ವರುಷಗಳು ಕಳೆದು ಹೋಗಿವೆ. ಈ ಕಳೆದು ಹೋದ ವರ್ಷಗಳು ಜನಮಾನಸದಲ್ಲಿ ಒಂದು ನೆನಪಾಗಿ ಉಳಿದಿವೆ. ಕಳೆದು ಹೋದ ಹಿಂದಿನ ವರ್ಷವು ಜನಗಳ ದೃಷ್ಟಿಯಲ್ಲಿ ಸಿಹಿ ಮತ್ತು ಕಹಿ ನೆನಪುಗಳ ಸಮಿಶ್ರಣವಾಗಿದೆ. ಮಾತ್ರವಲ್ಲದೆ ಜೀವನದಲ್ಲಿ ಹೊಸ ಬದಲಾವಣೆಯನ್ನು ತರುವುದರ ಜೊತೆಗೆ ಜನಮಾನಸದಲ್ಲಿ ಹಚ್ಚ ಹಸುರಾಗಿ ಉಳಿದಿದೆ. ಜೀವನವು ಹೇಳಿಕೊಟ್ಟ ಹಾಗೂ ಕಲಿಸಿಕೊಟ್ಟ ಪಾಠಗಳು ಅನೇಕ. ಜೀವನದ ಅನುಭವವು ಮರೆಯಲಾರದ ಅನುಬಂಧವಾಗಿದೆ. ಹಿಂದಿನ ವರ್ಷದಲ್ಲಿ ವಿಶ್ವ ಹಾಗೂ ರಾಷ್ಟçದಲ್ಲಿ ಆದ ಅನೇಕ ಘಟನಾವಳಿಗಳು, ರಾಜಕೀಯ, ಕ್ರೀಡೆ, ಸಾಂಸ್ಕೃತಿಕ, ವೈಜ್ಞಾನಿಕ ಅನ್ವೇಷಣೆಗಳು, ಸರ್ಕಾರದ ನೀತಿಗಳು, ಪ್ರವಾಹ ಪರಿಸ್ಥಿತಿಗಳು ಹೀಗೆ ಅನೇಕ ಸಕಾರಾತ್ಮಕ ಹಾಗೂ ನಕಾರಾತ್ಮಕವೂ ಆದ ಅನೇಕ ವಿಚಾರಗಳಿವೆ. ಒಬ್ಬ ವ್ಯಕ್ತಿಯ ಪಾಲಿಗೆ ಅದು ವೈಯಕ್ತಿಕ ವಿಚಾರವಾದರೆ, ರಾಷ್ಟçದ ಪಾಲಿಗೆ ಅದು ಸಾಮೂಹಿಕ ವಿಚಾರವಾಗಿರುತ್ತದೆ.

ಹಳೆಯ ವರ್ಷವು ಮುಗಿದು ಹೊಸ ವರ್ಷವನ್ನು ಸ್ವಾಗತಿಸುವುದು ಭಾವನಾತ್ಮಕವಾದ ಕ್ಷಣವಾಗಿದೆ. ಮನುಷ್ಯನ ಪಾಲಿಗೆ ಸಮಯ ಎಂಬುವುದು ಅದ್ಭುತ ಹಾಗೂ ಅತ್ಯಂತ ಅಮೂಲ್ಯವಾದದ್ದು. ಅದಕ್ಕಾಗಿ ಸಮಯವನ್ನು ಸದುಪಯೋಗ ಮಾಡಲು ಎಲ್ಲರೂ ಬಯಸುತ್ತಾರೆ. ನಮ್ಮ ಬದುಕಿನ ಅಧ್ಯಾಯದ ಹೊಸ ಪುಟ ತೆರೆಯಲು ಹಾಗೂ ಜೀವನದಲ್ಲಿ ಹೊಸ ಉಲ್ಲಾಸ, ಹೊಸ ಚೈತನ್ಯ ಹಾಗೂ ಹೊಸ ವಿಶ್ವಾಸ ತುಂಬಲು ಹೊಸ ವರ್ಷವು ಕಾದಿರುತ್ತದೆ. ಜೀವನದ ಅನೇಕ ನಿರೀಕ್ಷೆಗಳೊಡನೆ ಹೊಸ ಪುಟವು ಆರಂಭಗೊಳ್ಳುತ್ತದೆ.

ಈ ಹೊಸ ವರ್ಷದ ಸಂಭ್ರಮವು ಸಾಂಪ್ರದಾಯಿಕ ಪದ್ಧತಿಯ ಪ್ರಕಾರ ಹಿರಿಯರ ಆಶೀರ್ವಾದವನ್ನು ಪಡೆಯುದರೊಂದಿಗೆ ಆರಂಭವಾಗುತ್ತಿತ್ತು. ಲೋಕದ ಸುಖ, ಶಾಂತಿ, ನೆಮ್ಮದಿಗಾಗಿ ಪ್ರಾರ್ಥಿಸಲಾಗುತ್ತದೆ. ಜಗತ್ತಿನಲ್ಲಿ ಇಂದು ಪೈಪೋಟಿಯುಕ್ತ ಜೀವನವನ್ನು ನೋಡುತ್ತಿದ್ದೇವೆ. ದೇಶ ದೇಶಗಳ ನಡುವೆ ಒಳಜಗಳಗಳು, ದ್ವೇಷ, ಅಸೂಯೆಗಳು ನಡೆಯುತ್ತಿದ್ದು ಪ್ರೀತಿಯ ಕೊರತೆಯು ಎದ್ದು ಕಾಣುತ್ತಿದೆ. ಬಡವರ ಕಲ್ಯಾಣವಾಗಬೇಕಿದೆ. ವಿಶ್ವದಲ್ಲಿ ಶಾಂತಿ ನೆಲೆಸಬೇಕಿದೆ. ಮಾನವರೆಲ್ಲರೂ ಸಮಾನರೆಂಬ ಭಾವನೆಯು ಎಲ್ಲರಲ್ಲಿ ಮೂಡಬೇಕಿದೆ. ಕೊರೊನಾ ದಂತಹ ವೈರಸ್ ಕೊನೆಗಾಣಿಸಲು ಆರೋಗ್ಯ ಕ್ಷೇತ್ರದಲ್ಲಿ ಸಂಶೋಧನೆಗಳು ಆಗಬೇಕಾದ ಅನಿವಾರ್ಯತೆಯಿದೆ. ಹಿಂದುಳಿದ ರಾಷ್ಟçಗಳ ಅಭಿವೃದ್ಧಿಗೆ ಶ್ರಮಿಸಬೇಕಿದೆ. ವರ್ಷಗಳು ಹಲವು ಬಂದರೂ ಜನರ ಭಾವನೆಗಳು ಆಶೋತ್ತರಗಳು ಬದಲಾಗಬೇಕಿವೆ. ಪರಸ್ಪರ ಸಹಕಾರ ಸಹಬಾಳ್ವೆ ಮೂಡಬೇಕಿದೆ. ಕ್ರೌರ್ಯ ಕೊನೆಗಂಡು ಅಹಿಂಸೆ, ಪ್ರೀತಿ, ಶಾಂತಿ, ನ್ಯಾಯದ ಸ್ಥಾಪನೆಯಾಗಬೇಕಿದೆ.

ಹೊಸ ವರ್ಷದಂದು ನಾವು ನಮ್ಮ ಪ್ರೀತಿ ಪಾತ್ರರಿಗೆ ಸಂತೋಷ ದಿಂದ ಶುಭಾಶಯಗಳನ್ನು ಹೇಳುವ ರೀತಿಯಲ್ಲಿಯೇ ವರ್ಷವಿಡೀ ಅವರ ಸುಖ -ದುಃಖದಲ್ಲಿ ಭಾಗಿಯಾಗುತ್ತೇವೆಂದು ಪ್ರತಿಜ್ಞೆ ಮಾಡಬೇಕಾದ ಅನಿವಾರ್ಯತೆಯಿದೆ. ಸಮಾಜ, ದೇಶದ ಕಲ್ಯಾಣಕ್ಕೆ ಚಿಂತಿಸಬೇಕಿದೆ. ಅದರೊಟ್ಟಿಗೆ ಜೀವನದಲ್ಲಿ ಆದರ್ಶವಾದ ಗುಣಗಳನ್ನು ಬಳಸುವುದರ ಜೊತೆಗೆ ಇತರರಿಗೆ ಮಾದರಿ ಜೀವನವನ್ನು ಸಾಗಿಸಬೇಕಿದೆ. ಸ್ವ ಹಿತಕ್ಕಿಂತ ಪರರ ಹಿತವೇ ಶ್ರೇಷ್ಠ, ಹಾಗೂ ಹಕ್ಕು ಪ್ರತಿಪಾದನೆಗಿಂತ ಕರ್ತವ್ಯ ಪ್ರತಿಪಾದನೆ ಮುಖ್ಯವಾದುದ್ದು ಎಂಬುವುದನ್ನು ಮರೆಯಬಾರದಾಗಿದೆ. ಈ ಹೊಸ ವರ್ಷದಲ್ಲಿ ಸರ್ವರಿಗೂ ದಯಾಮಯ ದೇವರು ಸಮೃದ್ಧಿಯನ್ನು ಕರುಣಿಸಲಿ ಎಂದು ಆಶಿಸುವ.

ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

- ಬಿ.ಎನ್. ಶಾಂತಿಭೂಷಣ್.

ಅರ್ಥಶಾಸ್ತç ಉಪನ್ಯಾಸಕರು, ಸೆಂಟ್ ಆನ್ಸ್ ಪದವಿ ಕಾಲೇಜು, ವೀರಾಜಪೇಟೆ.