ನಾಪೋಕ್ಲು, ಜ. ೧: ಕೊಡಗಿನಲ್ಲಿ ಭತ್ತದ ಕೃಷಿ ಮಾಡುವ ರೈತರೇ ವಿರಳವಾಗಿದ್ದಾರೆ. ಅದರೂ, ಕಷ್ಟಪಟ್ಟು ಕೃಷಿ ಮಾಡಿದ ಭತ್ತವನ್ನು ಬೆಂಬಲ ಬೆಲೆಗೆ ಮಾರಾಟ ಮಾಡಲು ಹೋದರೆ ಆರ್‌ಟಿಸಿಯಲ್ಲಿ ಒಬ್ಬರ ಹೆಸರು ಮಾತ್ರ ಇರಬೇಕು ಎಂದು ತಿರಸ್ಕರಿಸಲಾಗುತ್ತಿದೆ ಎಂದು ಭತ್ತದ ಕೃಷಿಕರು ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯವಾಗಿ ಒಂದು ಕ್ವಿಂಟಾಲ್ ಭತ್ತಕ್ಕೆ ೧೧೦೦ ರೂ.ಗಳಂತೆ ಖರೀದಿಸಲಾಗುತ್ತಿದೆ. ಸರಕಾರ ಒಂದು ಕ್ವಿಂಟಾಲ್ ಭತ್ತಕ್ಕೆ ೧೯೫೦ ರೂ. ಬೆಂಬಲ ಬೆಲೆ ಘೋಷಿಸಿದೆ. ಅದರೆ, ಕುಶಾಲನಗರದ ಆರ್‌ಎಂಸಿಯಲ್ಲಿ ಮಾತ್ರ ಕೃಷಿಕರಿಂದ ಭತ್ತ ಖರೀದಿಸಲಾಗುತ್ತಿದೆ. ಅಲ್ಲಿ ಹೋದರೆ ಆರ್‌ಟಿಸಿಯ ಸಮಸ್ಯೆ ಎಂದು ಅಸಹಾಯಕತೆ ಪ್ರದರ್ಶಿಸುತ್ತಿದ್ದಾರೆ.
ಜಮ್ಮಾ ಹಿಡುವಳಿಯಲ್ಲಿ ಕುಟುಂಬದ ಸದಸ್ಯರೆಲ್ಲರೂ ಗದ್ದೆಯ ಆರ್‌ಟಿಸಿಗೆ ಸೇರ್ಪಡೆಯಾಗುತ್ತಾರೆ. ಅವರವರ ಪಾಲಿನ ಭೂಮಿಗೆ ಬೇರೆ, ಬೇರೆಯಾಗಿ ಕಂದಾಯ ನೀಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಒಬ್ಬರ ಹೆಸರಿರುವ ಆರ್‌ಟಿಸಿ ಹೇಗೆ ನೀಡಲು ಸಾಧ್ಯ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಿ ಕಂದಾಯ ರಶೀದಿ ಮತ್ತು ಕೃಷಿಕನ ಹೆಸರಿರುವ ಆರ್‌ಟಿಸಿ ಪಡೆದು ಭತ್ತ ಖರೀದಿಸಬೇಕು ಎಂದು ಕೃಷಿಕರಾದ ಬಿದ್ದಾಟಂಡ ಎಸ್.ತಮ್ಮಯ್ಯ ಆಗ್ರಹಿಸಿದ್ದಾರೆ.