ಮಡಿಕೇರಿ,ಜ.೧: ‘ಬೇಲಿಯೇ ಎದ್ದು ಹೊಲ ಮೇಯ್ದಂತೆ..,’ ಎಂಬ ಗಾದೆ ಮಾತು ಇಲ್ಲಿ ನಿಜವಾಗಿದೆ. ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಅರಣ್ಯ ಸಂಪತ್ತನ್ನು ಸದ್ದಿಲ್ಲದೆ ದೋಚಲಾಗುತ್ತಿದೆ. ಅದೂ ಕೂಡ
ಮೀಸಲು ಅರಣ್ಯ ಪ್ರದೇಶದಲ್ಲಿರುವ ಇಲಾಖೆಯ ಕಾವಲುಗಾರರಿರುವ ನಿಷೇಧಿತ ಪ್ರದೇಶದಿಂದ.., ಇಲಾಖೆಯ ಅಧಿಕಾರಿಯೋರ್ವರ
ಅಣತಿಯಂತೆ ಅಲ್ಲಿರುವ ಸಿಬ್ಬಂದಿಗಳೇ ಬೆಟ್ಟವನ್ನು ಬಗೆಯುವ ಕಾರ್ಯದಲ್ಲಿ ತೊಡಗಿರುವದು ನಿಧಾನವಾಗಿ ಬೆಳಕಿಗೆ ಬಂದಿದೆ..!
ಭಾಗಮAಡಲ ಅರಣ್ಯ ವಲಯದ ತೊಡಿಕಾನ ಉಪ ವಲಯದ ನಿಶಾನೆ ಮೊಟ್ಟೆಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳೇ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ನಿಷೇಧಿತ ಪ್ರದೇಶ
ನಿಶಾನೆಮೊಟ್ಟೆಯಲ್ಲಿ ಹಲವು ವರ್ಷಗಳ ಹಿಂದೆ ಅಕ್ರಮವಾಗಿ ಹರಳು ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಸಂದರ್ಭ ಅರಣ್ಯ ಇಲಾಖೆ, ಪೊಲೀಸರು ಸ್ಥಳಕ್ಕ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಜಿಲ್ಲಾಧಿಕಾರಿಗಳ
ಆದೇಶದಂತೆ ಸ್ಥಳದಲ್ಲಿ ಬೇಲಿ ನಿರ್ಮಿಸಿ, ಟೆಂಟ್ ಒಂದನ್ನು ನಿರ್ಮಿಸಿ ಅರಣ್ಯ ಇಲಾಖಾ ಸಿಬ್ಬಂದಿಗಳನ್ನು ಕಾವಲಿಗೆ ನಿಯೋಜಿಸಲಾಗಿತ್ತು. ಆ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಸಾರ್ವಜನಿಕರಿಗೆ ಪ್ರವೇಶ ನಿಷೇಧ ಹೇರಲಾಗಿತ್ತು.
ಕಾವಲಿಗಿದ್ದಾರೆ..!
ಈ ನಿಷೇಧಿತ ಪ್ರದೇಶದಲ್ಲಿ ಈರ್ವರು ಅರಣ್ಯ ರಕ್ಷಕರು ಹಾಗೂ ಓರ್ವ ಅರಣ್ಯ ವೀಕ್ಷಕರು ಪ್ರತಿನಿತ್ಯ ಕಾವಲಿಗಿರುತ್ತಾರೆ. ಅದೂ ಹರಳು ಕಲ್ಲು ಇರುವ ಜಾಗದಲ್ಲಿಯೇ. ಆದರೂ ಕೂಡ ಗಣಿಗಾರಿಕೆ ನಡೆಯುತ್ತಿದೆ ಎಂದರೇ ವಿಸ್ಮಯವೇ ಸರಿ..!
ಅಧಿಕಾರಿಗಳ ಧಾಳಿ
ಕಳೆದ ಡಿ. ೩೦ರಂದು ರಾತ್ರಿ ೮ ಗಂಟೆ ವೇಳೆಗೆ ನಿಶಾನೆ ಮೊಟ್ಟೆಯಲ್ಲಿ ಹರಳು ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂದು ವಲಯ ಅರಣ್ಯಾಧಿಕಾರಿ ದೇವರಾಜು ಅವರಿಗೆ ದೂರವಾಣಿ ಮೂಲಕ ಬಂದ ಮಾಹಿತಿ ಆಧಾರದಲ್ಲಿ ಸಿಬ್ಬಂದಿಗಳೊAದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಅರಣ್ಯ ರಕ್ಷಕ ಟೆಂಟ್‌ನ ಹಿಂಬದಿಯಲ್ಲಿ ನಿಂತಿರುವದನ್ನು ಕಂಡು ಅವರನ್ನು ವಿಚಾರಿಸಲಾಗಿ ಕಾಡು, ಹುಲ್ಲು ಕಡಿಯುತ್ತಿರುವದಾಗಿ ಹೇಳಿರುತ್ತಾನೆ. ಸುತ್ತ ಮುತ್ತ ಪರಿಶೀಲಿಸಿದಾಗ ಹುಲ್ಲನ್ನು ತುಳಿದು ಓಡಾಡಿರುವದು ಕಂಡುಬAದು ಅದರ ಜಾಡು ಹಿಡಿದು ನೋಡಿದಾಗ ಟೆಂಟ್‌ನ ಎದುರುಗಡೆ ಅಂದಾಜು ೩೦ ಮೀ.ದೂರದಲ್ಲಿ ಅಂದಾಜು ಮೂರು ಪಿಕ್ ಅಪ್‌ನಷ್ಟು ಹಸಿ ಮಣ್ಣು ದಾಸ್ತಾನಿರುವದು ಗೋಚರಿಸಿದೆ.
ಮಣ್ಣಿನ ಗುಡ್ಡೆಯ ಬಳಿ ಪ್ಲಾಸ್ಟಿಕ್ ಚೀಲಗಳಲ್ಲಿ ಮಣ್ಣು
ತುಂಬಿಸಿ ಇಟ್ಟಿರುವದು ಕಂಡು ಒಂದು ಅದನ್ನು ಅಧಿಕಾರಿ ಚಾಕುವಿನಿಂದ ಇರಿದು ಪರಿಶೀಲಿಸಿದಾಗ ಅದೂ ಕೂಡ ಆಗ ತಾನೇ ಹೊರತೆಗೆದ
ತಾಜಾ ಹಸಿ ಮಣ್ಣಾಗಿತ್ತು. ಈ ಬಗ್ಗೆ ಸ್ಥಳದಲ್ಲಿದ್ದ ಅರಣ್ಯ ರಕ್ಷಕರುಗಳಾದ ಸಬೇನ್, ಮಲ್ಲಿಕಾರ್ಜುನ ಹಾಗೂ ವೀಕ್ಷಕ ಜಗಧೀಶ್ ಅವರುಗಳನ್ನು ವಿಚಾರಿಸಿದಾಗ ಇದರ ಬಗ್ಗೆ ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಸರಕಾರಕ್ಕೆ ವರದಿ
ಸ್ಥಳ ಮಹಜರು ಮಾಡಿದ ಅಧಿಕಾರಿ ದೇವರಾಜು ಅವರು, ಸಂಪೂರ್ಣ ವಿವರಗಳೊಂದಿಗೆ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಈ ಪ್ರದೇಶದಲ್ಲಿ ಅಕ್ರಮವಾಗಿ ಹರಳು ಕಲ್ಲು ಗಣಿಗಾರಿಕೆ ನಡೆದಿರುವದಾಗಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಚೀಲದಲ್ಲಿ ಸಾಗಾಟ
ರಾತ್ರಿ ವೇಳೆ ಅಕ್ರಮವಾಗಿ ಭೂಮಿಯನ್ನು ಬಗೆದು ಹರಳು ಕಲ್ಲುಗಳಿರುವ ಮಣ್ಣನ್ನು ಚೀಲದಲ್ಲಿ ತುಂಬಿ ಸಮೀಪದಲ್ಲಿ ಹರಿಯುವ ನದಿಯಲ್ಲಿ ಮಣ್ಣನ್ನು ತೊಳೆದು ಕಲ್ಲನ್ನು ಬೇರ್ಪಡಿಸಿ ಸಾಗಿಸುತ್ತಿರುವದಾಗಿ ಗ್ರಾಮಸ್ಥರು ಹೇಳುತ್ತಾರೆ. ಇದು ನಿಷೇಧಿತ ಪ್ರದೇಶವಾದ್ದರಿಂದ ಇಲ್ಲಿಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ; ಒಂದು ವೇಳೆ ಯಾರಾದರೂ ಗೊತ್ತಿಲ್ಲದೆ ಹೋದರೂ ಇಲಾಖಾ ಸಿಬ್ಬಂದಿಗಳು ಅವರನ್ನು ಬೆನ್ನಟ್ಟುತ್ತಾರೆ. ಅಂತಹುದರಲ್ಲಿ ಬೇರೆ ಯಾರಿಗೂ ಗಣಿಗಾರಿಕೆ ಮಾಡಲು ಸಾಧ್ಯವಿಲ್ಲ, ಇಲಾಖಾ ಸಿಬ್ಬಂದಿಗಳೇ ಶಾಮೀಲಾಗಿ ಮಾಡುತ್ತಿದ್ದಾರೆ. ಬಹಳ ಸಮಯದಿಂದ ಈ ಕಳ್ಳತನ ನಡೆಯುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
‘ಕಳ್ಳನ ಕೈಗೆ ಮನೆಯ ಬೀಗದ ಕೀಲಿಕೈ ಕೊಟ್ಟಂತಾಗಿದೆ’ ಪರಿಸ್ಥಿತಿ..!
-ಕುಯ್ಯಮುಡಿ ಸುನಿಲ್, ಕುಡೆಕಲ್ ಸಂತೋಷ್