ಶ್ರೀಮಂಗಲ, ಜ. ೧: ನಾಲ್ಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೦-೨೧ನೇ ಸಾಲಿನಲ್ಲಿ ರೂ. ೧೦ ಕೋಟಿ ವಹಿವಾಟು ನಡೆಸಿ ರೂ. ೯.೯೫ ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ತಡಿಯಂಗಡ ಡಿ. ಸುಬ್ಬಯ್ಯ ವಿವರಿಸಿದರು.
ಸಂಘದ ಸಭಾಂಗಣದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂಘದ ಸದಸ್ಯರಿಗೆ ಕೃಷಿ ಹಾಗೂ ಕೃಷಿಯೇತರ ಸಾಲ ಒಟ್ಟು ರೂ. ೫.೪೫ ಕೋಟಿ ವಿತರಿಸಿದ್ದು, ಹಾಗೂ ರೂ. ೩.೫೦ ಕೋಟಿ ಮೌಲ್ಯದ ೧೮೦೦ ಟನ್ ರಸಗೊಬ್ಬರ, ಕೀಟ ನಾಶಕ, ಸಿಮೆಂಟ್ ಹಾಗೂ ಕೃಷಿ ಉಪಕರಣಗಳ ವ್ಯಾಪಾರ ನಡೆಸಿ ರೂ. ೧೯.೫೦ ಲಕ್ಷ ವ್ಯಾಪಾರ ಲಾಭಗಳಿಸಿರುತ್ತದೆ. ಸಾಲಗಾರ ಸದಸ್ಯರ ಹಿತದೃಷ್ಠಿಯಿಂದ ಆಭರಣ ಹಾಗೂ ಜಾಮೀನು ಸಾಲದ ಬಡ್ಡಿದರವನ್ನು ಕಡಿಮೆ ಮಾಡಿರುವುದಾಗಿ ಸಭೆಯಲ್ಲಿ ವಿವರಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಚಿಮ್ಮಂಗಡ ಕೆ. ಗಣಪತಿ, ನಿರ್ದೇಶಕರುಗಳಾದ ಎ.ಡಿ. ಮುಕುಂದ, ಎ.ಬಿ. ಮುತ್ತಪ್ಪ, ಎಂ.ಸಿ. ಸುರೇಶ್, ಬಿ.ಕೆ. ಬಾಬು, ಹೆಚ್.ಎನ್. ರಾಮಚಂದ್ರ, ಸಿ.ಕೆ. ಪಾಲಿ, ಪಿ.ಸಿ. ಕಾಳ, ಎಂ.ವಿ. ಆಶಾ, ಕೆ.ಡಿ.ಸಿ.ಸಿ. ಬ್ಯಾಂಕಿನ ಮೇಲ್ವಿಚಾರಕಾದ ಹೆಚ್.ಎಂ. ಬಸವರಾಜ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್. ಕುಶಾಲಪ್ಪ ಹಾಜರಿದ್ದರು.