ಗೋಣಿಕೊಪ್ಪಲು, ಜ. ೨: ಹಲವು ಸಮಯದ ಬಿಡುವು ನೀಡಿದ್ದ ಹುಲಿ ಇದೀಗ ಮತ್ತೆ ನಾಡಿನತ್ತ ಮುಖ ಮಾಡಿದ್ದು ರೈತರ ಜಾನುವಾರುಗಳನ್ನು ಬೇಟೆಯಾಡುತ್ತ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದೆ. ಪೊನ್ನಂಪೇಟೆ ತಾಲೂಕಿನ ಬೆಳ್ಳೂರು ಗ್ರಾಮದ ರೈತ ಮಲ್ಲಂಗಡ ಧರ್ಮಜ ಅವರ ಹಸುವನ್ನು ಶನಿವಾರ ಮಧ್ಯರಾತ್ರಿ ವೇಳೆ ಹುಲಿ ಕೊಂದುಹಾಕಿದೆ. ಮುಂಜಾನೆ ಸುದ್ದಿ ತಿಳಿದ ಬಿಜೆಪಿ ಕೃಷಿ ಮೊರ್ಚಾದ ಕಾರ್ಯದರ್ಶಿ ಮಲ್ಲಂಗಡ ದಿವಿನ್, ಸದಸ್ಯರಾದ ನೂರೆರ ಮನೊಹರ್, ಮುಕ್ಕಾಟಿರ ಪೆಮ್ಮಯ್ಯ ಹಾಗೂ ಇತರರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಬಿಜೆಪಿ ತಾಲೂಕು ಕೃಷಿ ಮೋರ್ಚಾದ ಅಧ್ಯಕ್ಷ ಕಟ್ಟೆರ ಈಶ್ವರ ತಿಮ್ಮಯ್ಯ ಅವರ ಮೂಲಕ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಹುಲಿ ಓಡಿಸಲು ಅಗತ್ಯ ಕ್ರಮಕೈಗೊಳ್ಳಲು ಮನವಿ ಮಾಡಿದರು. ಅಲ್ಲದೇ ಹಸುವಿನ ಮಾಲೀಕರಿಗೆ ಸರ್ಕಾರದ ನಿಯಮದಂತೆ ಕೂಡಲೇ ಪರಿಹಾರ ವಿತರಿಸಲು ಒತ್ತಾಯಿಸಿದರು. ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.