(ವರದಿ : ಹೆಚ್. ಕೆ. ಜಗದೀಶ್)

ಗೋಣಿಕೊಪ್ಪಲು. ಜ. ೧: ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಗ್ರಾಮ ಪಂಚಾಯಿತಿಗೆ ವಂಚಿಸಿ ಲಕ್ಷಾಂತರ ರೂಪಾಯಿ ಹಣವನ್ನು ದುರುಪ ಯೋಗಪಡಿಸಿಕೊಂಡ ಆರೋಪದಡಿ ಇಬ್ಬರು ಸಿಬ್ಬಂದಿಗಳ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.

ಕುಟ್ಟ ಗ್ರಾಮ ಪಂಚಾಯ್ತಿಯ ಬಿಲ್ ಕಲೆಕ್ಟರ್ ಬಿ.ಎನ್. ಮಹೇಶ್ ಹಾಗೂ ಅಟೆಂಡರ್ ಕೆ.ಜಿ. ರಾಜನ್ ವಿರುದ್ಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ ೪೦೮ ಅಡಿ ಪ್ರಕರಣ ದಾಖಲಾಗಿದೆ. ಗ್ರಾ.ಪಂ.ಆಡಳಿತ ಮಂಡಳಿ ತುರ್ತು ಸಭೆ ನಡೆಸಿ ಇಬ್ಬರು ನೌಕರರನ್ನು ಅಮಾನತು ಗೊಳಿಸಿದೆ.

ಕಳೆದ ೧೨ ವರ್ಷಗಳಿಂದ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ್ ಹಾಗೂ ಅಟೆಂಡರ್ ಆಗಿದ್ದ ರಾಜನ್ ಪಂಚಾಯಿತಿಯ ಬಹುತೇಕ ವ್ಯವಹಾರವನ್ನು ನಿರ್ವಹಣೆ ಮಾಡುತ್ತಿದ್ದರು. ಗ್ರಾಮದ ಸಾರ್ವಜನಿಕ ಹಲವಾರು ದಾಖಲೆ ಯನ್ನು ಇವರುಗಳೇ ಖುದ್ದಾಗಿ ಅವರ ಮನೆಗೆ ತಲುಪಿಸಿ ವಿಶ್ವಾಸ ಗಳಿಸಿದ್ದರು.

ರಶೀದಿ ರಹಸ್ಯ..!

ಜನರ ನಂಬಿಕೆಯನ್ನು ಬಂಡವಾಳ ಮಾಡಿಕೊಂಡ ಈರ್ವರು ಸಿಬ್ಬಂದಿಗಳು ಪಂಚಾಯಿತಿಗೆ ಸಾರ್ವಜನಿಕರಿಂದ ವಾರ್ಷಿಕವಾಗಿ ಬರಬೇಕಾದ ಕಟ್ಟಡ ತೆರಿಗೆ, ನೀರಿನ ಕಂದಾಯ, ಸೇರಿದಂತೆ ಇನ್ನಿತರ ತೆರಿಗೆಯನ್ನು ನಿಯಮ ಬಾಹಿರವಾಗಿ ಸಂಗ್ರಹಿಸಿದ್ದಲ್ಲದೇ, ತೆರಿಗೆದಾರರು ನೀಡುವ ಹಣಕ್ಕೆ ರಶೀದಿಯಲ್ಲಿ ಗೋಲ್ ಮಾಲ್ ಮಾಡಿ ಅಕ್ರಮವೆಸಗುತ್ತಿದ್ದರು ಎಂದು ಆರೋಪಿಸಲಾಗಿದೆ.

ತೆರಿಗೆದಾರರಿಗೆ ನೀಡುವ ಬಿಲ್‌ನಲ್ಲಿ ಹೆಚ್ಚಿನ ಹಣ ದಾಖಲಿಸುತ್ತಿದ್ದ ಬಿಲ್ ಕಲೆಕ್ಟರ್, ಅದರ ಕೆಳಭಾಗದಲ್ಲಿ ಕಾರ್ಬನ್ ಶೀಟ್ ಇಡದೆ ನಂತರ ಪಡೆದ ಹಣಕ್ಕಿಂತ ಕಡಿಮೆ ಮೊತ್ತವನ್ನು ದಾಖಲಿಸುತ್ತಿದ್ದ, ಇವೆಲ್ಲ ಅಕ್ರಮಗಳಿಗೆ ಅಟೆಂಡರ್ ರಾಜನ್ ಕೈಜೋಡಿಸುತ್ತಿದ್ದ. ಇದೇ ಹಣದಿಂದ ಇಬ್ಬರು ಐಷಾರಾಮಿ ಜೀವನ ನಡೆಸುತ್ತಿದ್ದರು ಎಂಬ ಆರೋಪ ಕೇಳಿಬಂದಿದ್ದು, ಇದೇ ರಶೀದಿಗಳು ಇವರಿಬ್ಬರ ರಹಸ್ಯವನ್ನು ಬಯಲು ಮಾಡಿದೆ.

ಇದೇ ರೀತಿ ತೆರಿಗೆ ಹೆಸರಿನಲ್ಲಿ ಜನರಿಗೆ ಮೋಸ ಮಾಡಿ ವರ್ಷದಿಂದ ವರ್ಷಕ್ಕೆ ಇವರ ದುರುಪಯೋಗದ ಹಣ ದ್ವಿಗುಣವಾಗುತ್ತಾ, ತಮ್ಮ ಖಜಾನೆ ತುಂಬಿಸಿಕೊಳ್ಳುತ್ತಿದ್ದರು. ವಾಮಮಾರ್ಗ ದಿಂದ ಬಂದ ಹಣದಿಂದ ಎರಡು ಕಾರು, ಬೈಕ್ ಖರೀದಿಸಿದ್ದಲ್ಲದೆ ಭಾರೀ ಬೆಲೆಬಾಳುವ ಮನೆ ಮನೆಯ ಒಡೆಯರಾಗಿದ್ದರು ಎಂದು ಮಾಹಿತಿ ಲಭ್ಯವಾಗಿದೆ.

ಶ್ರೀಮಂತರೇ ಟಾರ್ಗೆಟ್..! :

ತನ್ನ ಅಕ್ರಮ ಚಟುವಟಿಕೆಗಳಿಗೆ ಬಿಲ್ ಕಲೆಕ್ಟರ್ ಮಹೇಶ್ ಗ್ರಾಮದ ಶ್ರೀಮಂತ ಕಾಫಿ ಬೆಳೆಗಾರರು ಹಾಗೂ ಕಟ್ಟಡ ಮಾಲೀಕರನ್ನು ಟಾರ್ಗೆಟ್ ಮಾಡಿದ್ದ. ಪಂಚಾಯಿತಿಗೆ ವಾರ್ಷಿಕವಾಗಿ ಬರಬೇಕಾದ ತೆರಿಗೆಯನ್ನು ಕಟ್ಟುವಂತೆ ಒತ್ತಡ ಹೇರಿ ವಿಶ್ವಾಸದ ಮೇಲೆ ತೆರಿಗೆದಾರರು ಪಂಚಾಯಿತಿಗೆ ಹೋಗುವ ಸಮಯವಿಲ್ಲದ ಕಾರಣ ಈತನ ಬಳಿಯಲ್ಲೇ ಹಣ ನೀಡಿ ರಶೀದಿ ಪಡೆಯುತ್ತಿದ್ದರು.

ಆದರೆ ಈತ ತೆರಿಗೆದಾರರಿಗೆ ನೀಡುವ ರಶೀದಿಯಲ್ಲಿ ಹೆಚ್ಚು ಹಣವನ್ನು

(ಮೊದಲ ಪುಟದಿಂದ) ತೋರಿಸಿ ಬಿಲ್‌ನ ಕೌಂಟರ್ ಕಾಪಿಯಲ್ಲಿ ಕಡಿಮೆ ಮೊತ್ತವನ್ನು ದಾಖಲಿಸಿ ತೆರಿಗೆದಾರರಿಗೆ ಸಂಶಯ ಬಾರದಂತೆ ಅವ್ಯವಹಾರ ನಡೆಸುತ್ತಿದ್ದ.

ಪ್ರಕರಣ ಬಯಲಾಗಿದ್ದು ಹೇಗೆ.?

ಕುಟ್ಟ ಗ್ರಾಮದ ಚೋಡುಮಾಡ ಟಿ.ಬೆಳ್ಳಿಯಪ್ಪ ಅವರು ತಮ್ಮ ಕಟ್ಟಡ ತೆರಿಗೆಯನ್ನು ಪಾವತಿಸುವಂತೆ ಬಿಲ್ ಕಲೆಕ್ಟರ್ ಮಹೇಶ್ ಆಗಿಂದಾಗ್ಗೆ ದೂರವಾಣಿ ಮೂಲಕ ಒತ್ತಾಯಿಸುತ್ತಿದ್ದ. ಇದರಿಂದ ಒತ್ತಡಕ್ಕೆ ಸಿಲುಕಿದ ಮಾಲೀಕರು ಈತ ಕೇಳಿದ ಹಣವನ್ನು ನೀಡಿ ರಶೀದಿ ಪಡೆದಿದ್ದರು.

ನಂತರ ತಮ್ಮ ಆತ್ಮೀಯ ಬಳಗದಲ್ಲಿ ತೆರಿಗೆ ವಿಚಾರದಲ್ಲಿ ಚರ್ಚೆ ನಡೆಸಿದ್ದರು. ತೆರಿಗೆ ಹಣ ಪಾವತಿಯಲ್ಲಿ ಗೋಲ್‌ಮಲ್ ನಡೆದ ಬಗ್ಗೆ ಅನುಮಾನ ಮೂಡಿತ್ತು. ಈ ಸಂದರ್ಭ ಗ್ರಾ.ಪಂ.ಪಿಡಿಒರವರನ್ನು ಖುದ್ದಾಗಿ ಭೇಟಿ ಮಾಡಲು ನಿರ್ಧರಿಸಿ ಪಿಡಿಒರವರಿಂದ ಮಾಹಿತಿ ಬಯಸಿದ ವೇಳೆ ಪಂಚಾಯಿತಿಯ ಮೂಲ ರಶೀದಿಯಲ್ಲಿ ಲೋಪವಾಗಿರುವುದು ಬೆಳಕಿಗೆ ಬಂದಿದೆ. ನಂತರ ಉಳಿದ ತೆರಿಗೆದಾರರೊಂದಿಗೆ ಪಂಚಾಯಿತಿ ರಶೀದಿಯಲ್ಲಿ ವಂಚನೆಯಾಗುತ್ತಿರುವುದು ಬಯಲಾಗಿದೆ.

ಹಲವಾರು ತೆರಿಗೆದಾರರು ಈ ವಿಷಯದಲ್ಲಿ ಪೊನ್ನಂಪೇಟೆ ತಾಲೂಕು ಪಂಚಾಯಿತಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ. ಸಾರ್ವಜನಿಕ ದೂರಿನ ಅನ್ವಯ ಕುಟ್ಟ ಗ್ರಾ.ಪಂ.ಗೆ ಆಗಮಿಸಿದ ಇಒ ಅಪ್ಪಣ್ಣ ಪರಿಶೀಲನೆ ನಡೆಸಿದ ವೇಳೆ ಆರಂಭಿಕ ಹಂತದಲ್ಲಿ ರೂ. ೨,೫೫,೪೮೯ ರೂಪಾಯಿ ಹಣ ದುರುಪಯೋಗವಾಗಿದೆ ಎಂದು ತಿಳಿದು ಬಂದಿತ್ತು.

ಪಂಚಾಯಿತಿಯಲ್ಲಿ ಅಟೆಂಡರ್ ಹಾಗೂ ಬಿಲ್ ಕಲೆಕ್ಟರ್ ಸೇರಿ ಪಂಚಾಯಿತಿಗೆ ತೆರಿಗೆದಾರರಿಂದ ಬರಬೇಕಾದ ಲಕ್ಷಾಂತರ ಹಣವನ್ನು ತಮ್ಮ ಸ್ವಂತಕ್ಕೆ ಬಳಸಿಕೊಂಡು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ‘ಶಕ್ತಿ' ಪಂಚಾಯತಿ ಪಿಡಿಒ ಅನಿಲ್‌ರವರನ್ನು ಸಂಪರ್ಕಿಸಿತು. ಆದರೆ ಅನಿಲ್‌ರವರು ಹಿರಿಯ ಅಧಿಕಾರಿಗಳ ಅನುಮತಿಯಿಲ್ಲದೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ತಮ್ಮ ಹೇಳಿಕೆ ನೀಡಿದರು.

ನಂತರ ಈ ವಿಚಾರದಲ್ಲಿ ಮಾಹಿತಿ ಸಂಗ್ರಹಿಸಲು ಮುಂದಾಯಿತು. ಈ ವೇಳೆ ಪಂಚಾಯತಿ ಆಡಳಿತಕ್ಕೆ ಈ ವಿಷಯವು ಬೆಳಕಿಗೆ ಬರುತ್ತಿದ್ದಂತೆಯೇ ತುರ್ತು ಸಭೆ ಸೇರಿ ಚರ್ಚೆ ನಡೆಸಿತ್ತು. ಅಲ್ಲದೇ ಇಬ್ಬರು ನೌಕರರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಆಡಳಿತ ಮಂಡಳಿ ಸಭೆ ನಿರ್ಧಾರ ಕೈಗೊಂಡಿತ್ತು.

ತಕ್ಷಣದಿAದಲೇ ಜಾರಿಗೆ ಬರುವಂತೆ ಮಹೇಶ್ ಹಾಗೂ ರಾಜನ್‌ರವರನ್ನು ಅಮಾನತ್ತಿನಲ್ಲಿಡಲು ತೀರ್ಮಾನ ಕೈಗೊಳ್ಳಲಾಗಿತ್ತು.