ಕುಶಾಲನಗರ, ಜ. ೧: ಕಾವೇರಿ ನದಿ ಉತ್ಸವ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಶಂಕರೇಗೌಡ, ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಕುಶಾಲನಗರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಡಿಸೆಂಬರ್ ೧೭ ರಿಂದ ನಡೆಯಬೇಕಾಗಿದ್ದ ನದಿ ಉತ್ಸವ ಕಾರ್ಯಕ್ರಮ ಕಾರಣಾಂತರಗಳಿAದ ಮುಂದೂಡಲ್ಪಟ್ಟಿತ್ತು. ಇದೀಗ ಜನವರಿ ಮೂರನೇ ವಾರದಲ್ಲಿ ನದಿ ಉತ್ಸವ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮ ದಿನಾಂಕ ಸದ್ಯದಲ್ಲಿಯೇ ನಿಗದಿಯಾಗಲಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬAಧ ಹಿರಿಯ ಅಧಿಕಾರಿಗಳಾದ ಶಂಕರೇಗೌಡ, ಚನ್ನಕೇಶವ ಮತ್ತು ಅಧಿಕಾರಿಗಳು ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ನದಿ ತಟದಲ್ಲಿ ಕಾರ್ಯಕ್ರಮ ನಡೆಯಲಿರುವ ಸ್ಥಳ ಪರಿಶೀಲನೆ ನಡೆಸಿದರು.

ಕಾವೇರಿ ನದಿಯ ಉದ್ದಕ್ಕೂ ಒಂದು ವಾರಗಳ ಕಾಲ ಆರು ಕಡೆ ನಡೆಯಲಿರುವ ನದಿ ಉತ್ಸವ ಸಮಾರಂಭಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಜಲಸಂಪನ್ಮೂಲ ಸಚಿವರು, ಉಸ್ತುವಾರಿ ಸಚಿವರು ಮತ್ತು ಜನಪ್ರತಿನಿಧಿಗಳು ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿರುವ ಕಾವೇರಿ ನದಿ ಉತ್ಸವ ತಲಕಾವೇರಿ ಕ್ಷೇತ್ರದಿಂದ ಚಾಲನೆಗೊಳ್ಳಲಿದೆ. ಕೊಡಗು ಜಿಲ್ಲೆಯಲ್ಲಿ ಭಾಗಮಂಡಲ ಮತ್ತು ಕುಶಾಲನಗರದಲ್ಲಿ ಜೀವನದಿ ಕಾವೇರಿ ನದಿ ತಟದಲ್ಲಿ ಹಲವು ಕಾರ್ಯಕ್ರಮಗಳ ಜೊತೆಗೆ ವಿಶೇಷ ಆರತಿ ಕಾರ್ಯಕ್ರಮ ನಡೆಯಲಿದೆ.

ಇನ್ನೆರಡು ದಿನಗಳಲ್ಲಿ ಕಾರ್ಯಕ್ರಮ ದಿನಾಂಕ ಹೊರಬೀಳಲಿದೆ ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಎಂ.ಡಿ. ನಾಗೇಶ್ ತಿಳಿಸಿದ್ದಾರೆ.

ಈ ಹಿಂದೆ ನಿರ್ಧಾರ ಮಾಡಿದಂತೆ ಭಾಗಮಂಡಲ ಸಂಗಮ ಕ್ಷೇತ್ರ ಮತ್ತು ಕುಶಾಲನಗರದ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿ ಎರಡು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ.