ಸೋಮವಾರಪೇಟೆ, ಡಿ. ೩೧: ಈ ಗ್ರಾಮದಲ್ಲಿ ಶೇ. ೯೮ರಷ್ಟು ಕುಟುಂಬಗಳಿಗೆ ಕೃಷಿಯೇ ಜೀವನಾಧಾರ. ಆಹಾರ-ತೋಟಗಾರಿಕಾ ಬೆಳೆಗಳನ್ನು ಬೆಳೆಯವ ಇಲ್ಲಿನ ರೈತರಿಗೆ ನೀರಿನ ಕೊರತೆ ಹೇಳತೀರದ್ದಷ್ಟು. ಗ್ರಾಮದಲ್ಲಿ ೯ ಕೆರೆಗಳಿದ್ದರೂ ಸಮರ್ಪಕ ನೀರಿಲ್ಲ. ಪರಿಣಾಮ ಒಂದು ಕುಟುಂಬ ಕನಿಷ್ಟ ಮೂರು ಬೋರ್ವೆಲ್ಗಳನ್ನು ಕೊರೆಸಿ ಲಭ್ಯವಿರುವ ನೀರಿನಲ್ಲಿಯೇ ಕೃಷಿ ಮಾಡಬೇಕು. ಬೇಸಿಗೆಯಲ್ಲಿ ಬೋರ್ವೆಲ್ ನೀರು ಖಾಲಿಯಾದರೆ ಫಸಲು ನಷ್ಟ ಅನುಭವಿಸಲೇಬೇಕು. ಇಂತಹ ಗ್ರಾಮಕ್ಕೆ ಇದೀಗ ಭಗೀರಥನೇ ಕಾಲಿಟ್ಟಂತೆ ಸಂಭ್ರಮ. ಇದಕ್ಕೆ ಕಾರಣ; ಕಳೆದ ೧೫ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಏತನೀರಾವರಿ ಯೋಜನೆಗೆ ಸರ್ಕಾರ ೭ ಕೋಟಿ ಅನುದಾನ ಒದಗಿಸಿರುವುದು.
ತಾಲೂಕಿನ ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಗುತ್ತಿ-ಹೊಸಹಳ್ಳಿ ಗ್ರಾಮದಲ್ಲಿ ಕಳೆದ ೧೫ ವರ್ಷಗಳಿಂದ ಸ್ಥಗಿತಗೊಂಡಿರುವ ಏತ ನೀರಾವರಿ ಯೋಜನೆಯನ್ನು ಮತ್ತೆ ಪ್ರಾರಂಭಿಸಿ, ಪೂರ್ಣಗೊಳಿಸಲು ಕರ್ನಾಟಕ ಸರ್ಕಾರ ರೂ. ೭ ಕೋಟಿ ವೆಚ್ಚದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಕಳೆದ ೧೫ ವರ್ಷಗಳ ಹಿಂದೆ ಭೂಮಿಪೂಜೆ ನೆರವೇರಿ ಅಲ್ಪ ಪ್ರಮಾಣದಲ್ಲಿ ಕೈಗೊಂಡಿದ್ದ ಏತ ನೀರಾವರಿ ಯೋಜನೆ, ಈ ಅವಧಿಯಲ್ಲಿ ಪೂರ್ಣಗೊಳ್ಳುವ ಭರವಸೆ ಈ ಭಾಗದ ಕೃಷಿಕರಲ್ಲಿ ಮೂಡಿದೆ.
ಕಳೆದ ೧೫ ವರ್ಷಗಳ ಹಿಂದೆ ಗ್ರಾಮದ ಚಾಮಿಮನೆ ಕಟ್ಟೆ ತೋಡಿಗೆ (ಕಲ್ಲುಗುಂಡಿ ಮೂಲೆ) ಅಡ್ಡಲಾಗಿ ಸಣ್ಣ ಚೆಕ್ ಡ್ಯಾಂ ನಿರ್ಮಿಸಿ, ಅಲ್ಲಿಂದ ಸುಮಾರು ಒಂದೂವರೆ ಕಿ.ಮೀ. ದೂರವಿರುವ ದಿಡ್ಡದೇವರ ಕೆರೆಗೆ ನೀರು ಹಾಯಿಸುವುದು. ಅಲ್ಲಿಂದ ಗ್ರಾಮದಲ್ಲಿರುವ ಇತರ ೮ ಕೆರೆಗಳಿಗೆ ನೀರೊದಗಿಸುವ ಮೂಲಕ ಸಾವಿರಾರು ಏಕರೆ ಪ್ರದೇಶದಲ್ಲಿ ಕೃಷಿಕಾರ್ಯ ಕೈಗೊಳ್ಳಲು ಅವಕಾಶ ಕಲ್ಪಿಸುವ ದೂರದೃಷ್ಟಿಯ ಯೋಜನೆ ಇದಾಗಿದ್ದು, ಅನುದಾನದ ಕೊರತೆಯಿಂದ ಏತನೀರಾವರಿ ಯೋಜನೆ ಹಳ್ಳಹಿಡಿದಿತ್ತು.
ಆರಂಭದಲ್ಲಿ ಸಣ್ಣ ಚೆಕ್ಡ್ಯಾಂ ನಿರ್ಮಿಸಿದ್ದನ್ನು ಹೊರತುಪಡಿಸಿದರೆ ಇನ್ನಿತರ ಕಾಮಗಾರಿಗೆ ಹಣದ ಕೊರತೆ ಎದುರಾಗಿ, ಯೋಜನೆ ಸ್ಥಗಿತಗೊಂಡಿತ್ತು. ಇದರಿಂದಾಗಿ ಹೊಸಗುತ್ತಿ-ಹೊಸಹಳ್ಳಿ ಗ್ರಾಮದ ಅನ್ನದಾತರ ಕನಸು ಕಮರಿಹೋಗಿತ್ತು.
ಈ ಬಗ್ಗೆ ಗ್ರಾಮಸ್ಥರು ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರಿಗೆ ಪದೇ ಪದೇ ಒತ್ತಡ ಹೇರುತ್ತಾ ಬಂದಿದ್ದರು. ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭವೂ ಗ್ರಾಮಸ್ಥರ ಒಕ್ಕೊರಲಿನ ಬೇಡಿಕೆ ಏತನೀರಾವರಿಯೇ ಆಗಿತ್ತು. ಈ ಸಂದರ್ಭ ಶಾಸಕ ರಂಜನ್, ಈ ಅವಧಿಯೊಳಗೆ ಯೋಜನೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಸರ್ಕಾರದ ಮಟ್ಟದಲ್ಲಿ ವ್ಯವಹರಿಸಿ ಕೊನೆಗೂ ೭ ಕೋಟಿ ವೆಚ್ಚದ ಬೃಹತ್ ಯೋಜನೆಗೆ ಅನುದಾನ ಬಿಡುಗಡೆ ಮಾಡಿಸಿದ್ದಾರೆ.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಮೂಲಕ ಹೊಸಗುತ್ತಿ ಗ್ರಾಮದಲ್ಲಿ ರೂ. ೭ ಕೋಟಿ ವೆಚ್ಚದಲ್ಲಿ ಏತ ನೀರಾವರಿ ಯೋಜನೆ ಜಾರಿಗೊಳಿಸಲು ಸರ್ಕಾರ ಕಳೆದ ತಾ. ೧೮.೧೨.೨೦೨೧ರಂದು ಅನುಮೋದನೆ ನೀಡಿದ್ದು, ಪ್ರಥಮ ಹಂತವಾಗಿ ೨.೩೩ ಕೋಟಿ ಅನುದಾನ ಬಿಡುಗಡೆಗೊಳಿಸಿದೆ. ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಆದಷ್ಟು ಶೀಘ್ರವಾಗಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ‘ಶಕ್ತಿ’ಗೆ ತಿಳಿಸಿದ್ದಾರೆ.
ಕಳೆದ ೨೦೧೮-೧೯ನೇ ಸಾಲಿನ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಮೂಲಕ ಕೆಯುಡಬ್ಲೂö್ಯಎಸ್, ಡಬ್ಲೂö್ಯಡಿಆರ್ಓ,, ಪಿಡಬ್ಲೂö್ಯಡಿ, ಸೆಸ್ಕಾಂನಿAದ ಅಂದಾಜು ಪಟ್ಟಿ ತಯಾರಿಸಿದ್ದು, ೨೦೧೯-೨೦ನೇ ಸಾಲಿನ ಪಿಡಬ್ಲೂö್ಯಡಿ ಎಲೆಕ್ಟಿçಕಲ್ ವಿಭಾಗದ ದರಪಟ್ಟಿ ಹಾಗೂ ಮಾರುಕಟ್ಟೆ ದರಗಳನ್ನು ಅಳವಡಿಸಿಕೊಂಡು ಯೋಜನೆ ಸಿದ್ಧಪಡಿಸಲಾಗಿದೆ.
೯ ಕೆರೆಗಳಿಗೆ ನೀರಿನ ಸೌಲಭ್ಯ: ಸದರಿ ಅಂದಾಜಿನಲ್ಲಿ ೧೨೦ ಅಶ್ವ ಶಕ್ತಿ ಸಾಮರ್ಥ್ಯದ ಎರಡು ಕಾರ್ಯನಿರತ ಮತ್ತು ಅಷ್ಟೇ ಸಾಮರ್ಥ್ಯದ ಒಂದು ಹೆಚ್ಚುವರಿ ವರ್ಟಿಕಲ್ ಟರ್ಬೈನ್ ಪಂಪುಗಳನ್ನು ಅಳವಡಿಸುವುದು. ೧೬೬ ಮಿ.ಮೀ.ವ್ಯಾಸದ ೨೫೨೦ ಮೀ. ಉದ್ದದ ಹೆಚ್ಡಿಪಿಇ ಪೈಪ್ಗಳನ್ನೊಳಗೊಂಡ ಏರು ಕೊಳವೆ ಮಾರ್ಗವನ್ನು ನಿರ್ಮಿಸಿ, ಚಾಮಿಮನೆ ಕಟ್ಟೆ ತೋಡಿನಿಂದ ೧೧ ಎಂಸಿಎಫ್ಟಿ ನೀರನ್ನು ಎತ್ತಿ ೯ ಕೆರೆಗಳಿಗೆ ನೀರು ತುಂಬಿಸಲು ಹಾಗೂ ಇತರ ಅವಶ್ಯಕ ಅಂಶಗಳಿಗೆ ಅಂದಾಜು ಪಟ್ಟಿಯಲ್ಲಿ ಅವಕಾಶ ಮಾಡಲಾಗಿದೆ.
ಯೋಜನೆಯಲ್ಲಿ ಆಲೂರುಸಿದ್ದಾಪುರ ಗ್ರಾಮ ಪಂಚಾಯತ್ನ ಹೊಸಗುತ್ತಿ, ಹೊಸಹಳ್ಳಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರಾವರಿ ಸೌಲಭ್ಯ ಸ್ಥಿರೀಕರಿಸಲು ವಿನ್ಯಾಸಿಸಲಾಗಿದೆ. ಈ ಕಾಮಗಾರಿಯ ಅಂದಾಜು ಪಟ್ಟಿಯನ್ನು ದಿನಾಂಕ ೦೫.೦೮.೨೦೨೦ರಂದು ನಡೆದ ತಾಂತ್ರಿಕ ಮೌಲ್ಯ ನಿರ್ಣಯ ಸಮಿತಿಯ ಸಭೆಯಲ್ಲಿ ಮಂಡಿಸಿದ್ದು, ಕೆಲವೊಂದು ಷರತ್ತಿಗೊಳಪಟ್ಟು ಉದ್ದೇಶಿತ ಯೋಜನೆಗೆ ಅನುಮತಿ ನೀಡಿದೆ.
೨೦೨೧-೨೨ನೇ ಸಾಲಿನಲ್ಲಿ ಲೆಕ್ಕ ಶೀರ್ಷಿಕೆ ೪೭೦೨-ಏತ ನೀರಾವರಿ ಯೋಜನೆ, ಪ್ರಧಾನ ಕಾಮಗಾರಿಗಳ ಅಡಿಯಲ್ಲಿ ಕಾಮಗಾರಿ ಕೈಗೊಳ್ಳಲು ೭೦೦ ಲಕ್ಷ ಅಂದಾಜಿಸಿದ್ದು, ೨೩೩.೩೩ ಲಕ್ಷ ಅನುದಾನದೊಂದಿಗೆ ಪ್ರಾರಂಭಿಕವಾಗಿ ಕೆಲಸ ಪ್ರಾರಂಭಿಸಲು ಅವಕಾಶ ಕಲ್ಪಿಸಲಾಗಿದೆ.
ಇದರೊಂದಿಗೆ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಜಮೀನು ಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಬೇಕು. ಅಂದಾಜುಪಟ್ಟಿಗಿAತ ಅಧಿಕ ಅನುದಾನ ಬೇಕಿದ್ದಲ್ಲಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು ಕಾಮಗಾರಿ ಪೂರ್ಣಗೊಳಿಸುವಂತೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ ವೈ.ಎನ್. ವೀಣಾ ಅವರು ತಾ. ೧೮ರಂದು ಆದೇಶ ಹೊರಡಿಸಿದ್ದಾರೆ.
೨ ಸಾವಿರಕ್ಕೂ ಅಧಿಕ ಏಕರೆಗೆ ವರದಾನ: ಉದ್ದೇಶಿತ ಯೋಜನೆಯು ಹೊಸಗುತ್ತಿ-ಹೊಸಹಳ್ಳಿ ವ್ಯಾಪ್ತಿಯ ಸುಮಾರು ೩೦೦ಕ್ಕೂ ಅಧಿಕ ಕುಟುಂಬಗಳ, ೨ ಸಾವಿರಕ್ಕೂ ಅಧಿಕ ಏಕರೆ ಪ್ರದೇಶದಲ್ಲಿ ಕೃಷಿ ಕಾರ್ಯ ಕೈಗೊಳ್ಳಲು ವರದಾನ ಕಲ್ಪಿಸಲಿದೆ.
ಈ ಭಾಗದಲ್ಲಿ ಭತ್ತ, ಜೋಳ, ರಾಗಿ, ಕಾಫಿ, ಕರಿಮೆಣಸು, ಶುಂಠಿ, ಹಸಿ ಮೆಣಸು, ಸಿಹಿ ಗೆಣಸು, ಕ್ಯಾನೆ, ಮರ ಗೆಣಸು, ಬಾಳೆ, ಅಡಿಕೆ, ತೆಂಗು ಬೆಳೆಯಲಾಗುತ್ತಿದ್ದು, ಬೋರ್ವೆಲ್ ಹಾಗೂ ಮಳೆ ನೀರನ್ನೇ ಆಶ್ರಯಿಸುವಂತಾಗಿದೆ.
ಬೇಸಿಗೆ ಸಮಯದಲ್ಲಿ ಬೋರ್ವೆಲ್ನಲ್ಲಿ ನೀರು ಇಳಿಮುಖವಾದರೆ ಕೃಷಿ ಫಸಲನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಅನಿವಾರ್ಯವಾಗಿ ಫಸಲು ನಷ್ಟ ಅನುಭವಿಸಲೇಬೇಕಿದೆ. ಈ ಯೋಜನೆ ಕಾರ್ಯಗತವಾದರೆ ನಮ್ಮ ಬಹುವರ್ಷಗಳ ಕನಸು ನನಸಾಗಲಿದೆ. ಇನ್ನೂ ಹೆಚ್ಚಿನ ಕೃಷಿ ಕಾರ್ಯಕೈಗೊಳ್ಳಲು, ವರ್ಷವಿಡೀ ಕೃಷಿ ಮಾಡಲು ಅನುಕೂಲವಾಗಲಿದೆ ಎಂದು ಗ್ರಾಮಸ್ಥರಾದ ಜಗದೀಶ್(ಜಯಣ್ಣ) ಕುಮಾರ, ಸುರೇಶ್, ರಾಂಪ್ರಸಾದ್, ಹೆಚ್.ಡಿ. ತಿಮ್ಮೇಗೌಡ, ಮಾಲಂಬಿ ಗಂಗಾಧರ್, ಆಲೂರು ಸಿದ್ದಾಪುರ ಜಯಕುಮಾರ್ ಸೇರಿದಂತೆ ಇತರರು ‘ಶಕ್ತಿ’ಯೊಂದಿಗೆ ಅಭಿಪ್ರಾಯಿಸಿದ್ದಾರೆ.
ದೊಡ್ಡಕೆರೆ ತುಂಬಿದರೆ ಸುಭೀಕ್ಷೆ: ಹೊಸಗುತ್ತಿ ಗ್ರಾಮದಲ್ಲಿರುವ ದಿಡ್ಡದೇವನ ಕೆರೆ (ದೊಡ್ಡಕೆರೆ) ತುಂಬಿದರೆ ಗ್ರಾಮ ಸುಭೀಕ್ಷವಾಗಲಿದೆ. ೨.೧೦ ಏಕರೆ ವಿಸ್ತೀರ್ಣ ಹೊಂದಿರುವ ದೊಡ್ಡಕೆರೆ ಸದ್ಯ ಬರಡು ಭೂಮಿಯಂತಾಗಿದ್ದು, ಒಂದು ಹನಿಯೂ ನೀರಿಲ್ಲ. ಈ ಯೋಜನೆಯನ್ವಯ ಚಾಮಿಮನೆ ಕಟ್ಟೆ ತೋಡಿನಿಂದ ದೊಡ್ಡ ಕೆರೆಗೆ ನೀರು ಹಾಯಿಸಿದರೆ ಕೆರೆ ತುಂಬಲಿದೆ. ಅಲ್ಲಿಂದ ಇತರ ೮ ಕೆರೆಗಳಿಗೆ ನೀರೊದಗಿಸಿದರೆ ಕೃಷಿ ಚಟುವಟಿಕೆಗೆ ಹೆಚ್ಚಿನ ಅನುಕೂಲವಾಗಲಿದ್ದು, ಅಂತರ್ಜಲ ಮಟ್ಟವೂ ಸುಧಾರಿಸಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
೩೦೦ಕ್ಕೂ ಅಧಿಕ ಬೋರ್ವೆಲ್ಗಳು: ಸೋಮವಾರಪೇಟೆ ತಾಲೂಕಿನಲ್ಲಿಯೇ ಅತೀ ಹೆಚ್ಚು ಬೋರ್ವೆಲ್ಗಳಿರುವ ಗ್ರಾಮಗಳ ಪಟ್ಟಿಯಲ್ಲಿ ಹೊಸಗುತ್ತಿ-ಹೊಸಹಳ್ಳಿ ಪ್ರಥಮ ಸ್ಥಾನದಲ್ಲಿದೆ. ಬಹುತೇಕ ಎಲ್ಲಾ ಕುಟುಂಬಗಳೂ ಬೋರ್ವೆಲ್ ಹೊಂದಿದ್ದು, ಕೃಷಿಗೆ ಇದೇ ಆಧಾರವಾಗಿದೆ. ಬೇಸಿಗೆ ಸಮಯದಲ್ಲಿ ಬೋರ್ವೆಲ್ ನೀರು ಕಡಿಮೆಯಾಗುತ್ತಿದೆ. ಹಲವಷ್ಟು ಬೋರ್ವೆಲ್ಗಳು ನೀರಿಲ್ಲದೇ ಸೊರಗಿವೆ. ಕೆಲವೊಮ್ಮೆ ವಿದ್ಯುತ್ ವ್ಯತ್ಯಯದಿಂದ ನೀರು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ವ್ಯಾಪ್ತಿಯ ಕೆರೆಗಳು ತುಂಬಿದರೆ ಎಲ್ಲಾ ಬೋರ್ವೆಲ್ಗಳೂ ಸಹ ಜೀವಕಳೆ ಪಡೆಯಲಿವೆ ಎಂಬ ಆಶಾಭಾವನೆ ಕೃಷಿಕರಲ್ಲಿ ಮೂಡಿದೆ.
ಒಟ್ಟಾರೆ ಕಳೆದ ೧೫ ವರ್ಷಗಳ ಹಿಂದೆ ಚಾಲನೆ ಕಂಡು ಅರ್ಧಕ್ಕೆ ಸ್ಥಗಿತಗೊಂಡಿದ್ದ, ಹೊಸಗುತ್ತಿ ಏತನೀರಾವರಿ ಯೋಜನೆಗೆ ಮರುಜೀವ ದೊರೆತಿದ್ದು, ಅನುದಾನ ಕೊರತೆಯ ಗ್ರಹಣದಿಂದ ಹೊರಬಂದಿದೆ. ಶಾಸಕ ರಂಜನ್ ಅವರ ಪ್ರಯತ್ನದಿಂದ ೭ ಕೋಟಿ ಅನುದಾನ ಬಿಡುಗಡೆಯಾಗಿರುವುದು ಸ್ಥಳೀಯರ ಹರ್ಷಕ್ಕೆ ಕಾರಣವಾಗಿದೆ. ಯೋಜನೆಯ ಕಾಮಗಾರಿ ಕಳಪೆಯಾಗದಂತೆ ಜಾಗ್ರತೆ ವಹಿಸುವ ಜವಾಬ್ದಾರಿಯೂ ಗ್ರಾಮಸ್ಥರ ಮೇಲಿದೆ.
- ವಿಜಯ್ ಹಾನಗಲ್