ಮಡಿಕೇರಿ,ಡಿ.೩೦: ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಶಿಸ್ತು ಪಾಲಿಸುವದರೊಂದಿಗೆ ಸ್ವಚ್ಛತೆಯತ್ತ ಗಮನ ಹರಿಸಬೇಕೆಂದು ದಾನಿ ಕುಕ್ಕೇರ ಚಿಣ್ಣಪ್ಪ ಕರೆ ನೀಡಿದರು.

ಇಲ್ಲಿಗೆ ಸನಿಹದ ಮಕ್ಕಂದೂರು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ಒದಗಿಸಲಾದ ಕ್ರೀಡಾ ಸಮವಸ್ತç ವಿತರಣೆ ಮಾಡಿ ಅವರು ಮಾತನಾಡಿದರು. ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಬಗ್ಗೆ ಕೀಳರಿಮೆ ಇರಬಾರದು, ಶಾಲೆಯಲ್ಲಿ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿ ಕೊಂಡು ಸಾಧನೆ ಮಾಡಬೇಕೆಂದು ಹೇಳಿದರು. ಶಿಸ್ತು ಮೈಗೂಡಿಸಿಕೊಂಡರೆ ಸಾಧನೆ ಸುಲಭ, ಇದರೊಂದಿಗೆ ಸ್ವಚ್ಛತೆಯತ್ತಲೂ ಗಮನ ಹರಿಸಬೇಕೆಂದು ಕಿವಿ ಮಾತು ಹೇಳಿದರು. ಕೇವಲ ವೈದ್ಯ, ಇಂಜಿನಿಯರ್ ಆಗುವ ಬಗ್ಗೆ ಯೋಚಿಸದೆ ದೇಶ ರಕ್ಷಣೆಯ ಮಹತ್ಕಾರ್ಯವಾದ ಸೇನೆಗೆ ಸೇರುವತ್ತ ಆಸಕ್ತಿ ತೋರಬೇಕು. ಸೇನೆಯಲ್ಲಿ ದೊರಕುವ ಗೌರವ ಬೇರೆಲ್ಲಿಯೂ ಸಿಗಲು ಸಾಧ್ಯವಿಲ್ಲವೆಂದು ವಿದ್ಯಾರ್ಥಿಗಳ ಗಮನಕ್ಕೆ ತಂದರು.

ಅತಿಥಿಯಾಗಿದ್ದ ಶಕ್ತಿ ಪತ್ರಿಕೆ ಉಪ ಸಂಪಾದಕ ಕುಡೆಕಲ್ ಸಂತೋಷ್ ಮಾತನಾಡಿ, ಶಿಕ್ಷಕರು ಶಾಲೆಯನ್ನು ಸಂಬಳಕ್ಕಾಗಿ ದುಡಿಯುವ ಸಂಸ್ಥೆ ಎಂದು ತಿಳಿದುಕೊಳ್ಳದೆ ತಮ್ಮ ಮನೆ ಎಂದು ತಿಳಿದು ಶಾಲೆಯ ಅಭಿವೃದ್ಧಿಯತ್ತಲೂ ಗಮನ ಹರಿಸಿದರೆ ಅಂತಹ ಶಾಲೆಗಳು ಉನ್ನತಿ ಸಾಧಿಸಲು ಸಾಧ್ಯವಾಗುತ್ತದೆ. ಉತ್ತಮ ಫಲಿತಾಂಶ ಹೊಂದಲೂ ಅನುಕೂಲವಾಗುತ್ತದೆ. ಶಾಲೆಗಳಿಗೆ ನೆರವು ನೀಡುವ ದಾನಿಗಳಿಂದಾಗಿಯೂ ಶಾಲೆ ಪ್ರಗತಿ ಸಾಧಿಸಲು ಕಾರಣವಾಗುತ್ತದೆ ಎಂದು ಹೇಳಿದರು. ವಿದ್ಯಾರ್ಥಿಗಳು ದಾನಿಗಳಿಂದ ಸಿಗುವ ನೆರವನ್ನು ಸದುಪಯೋಗಪಡಿಸಿಕೊಂಡು ಸಾಧನೆ ಮಾಡಬೇಕೇಂದು ಹೇಳಿದರು.

ವೇದಿಕೆಯಲ್ಲಿ ಸ್ಥಳೀಯ ಟೀಂ ಟೈಟನ್ಸ್ ಕ್ರಿಕೆಟ್ ತಂಡದ ಮಹೇಶ್, ತೀರ್ಥ, ದಿನೇಶ್ ಇದ್ದರು. ವೃಂದಾನ್ ಕೂರ್ಗ್ ರೆಸಾರ್ಟ್ನ ಕುಕ್ಕೇರ ಚಿಣ್ಣಪ್ಪ, ಟೀಂ ಟೈಟನ್ಸ್, ಕೆದಂಬಾಡಿ ಕವಿಪ್ರಸಾದ್, ರಾಜೇಶ್ ಅಣ್ವೇಕರ್ ಅವರುಗಳು ನೀಡಿದ ನೆರವಿನಿಂದ ಸಮವಸ್ತç ವಿತರಣೆ ಮಾಡಲಾಯಿತು. ಶಾಲೆಯ ಮುಖ್ಯ ಶಿಕ್ಷಕ ಸುಕ್ರುದೇವೇಗೌಡ ಸ್ವಾಗತಿಸಿದರೆ, ದೈಹಿಕ ಶಿಕ್ಷಕ ರಾಘವೇಂದ್ರ ಶೆಟ್ಟಿ ನಿರೂಪಿಸಿದರು. ಶಿಕ್ಷಕಿ ಮಾಲಿನಿ ವಂದಿಸಿದರು.