ಮಡಿಕೇರಿ, ಡಿ. ೩೦: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಪಾಲೆಮಾಡಿನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ನಿನ್ನೆ ದಿನ ಭೂಮಿ ಪೂಜೆ ನಡೆದಿದೆ. ಆದರೆ ಕ್ರೀಡಾಂಗಣಕ್ಕಾಗಿ ಮಂಜೂರು ಆಗಿರುವ ಜಾಗದಲ್ಲಿ ಪರಿಶಿಷ್ಟ ಜಾತಿ - ಪಂಗಡ ಹಾಗೂ ಹಿಂದುಳಿದ ವರ್ಗದ ಸ್ಮಶಾನಕ್ಕೆ ಜಾಗಬೇಕೆಂಬ ಬೇಡಿಕೆಯೊಂದಿಗೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹಲವು ವರ್ಷಗಳ ಕಾಲ ಹೋರಾಟ ನಡೆಸಿತ್ತು. ಇದರ ಪರಿಣಾಮ ಕ್ರೀಡಾಂಗಣ ನಿರ್ಮಾಣ ನೆನೆಗುದಿಗೆ ಬಿದ್ದಿತ್ತು.

ಆದರೆ ಇದೀಗ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ವಿಶೇಷ ಆಸಕ್ತಿ ವಹಿಸಿ ಹೋರಾಟ ಸಮಿತಿಯರನ್ನು ಹಾಗೂ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಪ್ರಮುಖರನ್ನೊಳಗೊಂಡು ಹಲವು ಸಭೆಗಳನ್ನು ನಡೆಸಿ ಹೋರಾಟಗಾರರ ಬೇಡಿಕೆಗಳಿಗೆ ಕ್ರಿಕೆಟ್ ಅಸೋಸಿಯೇಷನ್ ಸ್ಪಂದಿಸುವ ನಿಟ್ಟಿನಲ್ಲಿ ಕ್ರಮಕೈಗೊಂಡಿದ್ದು, ಹೋರಾಟಗಾರರ ಕೆಲ ಬೇಡಿಕೆಗಳ ಈಡೇರಿಕೆಗೆ ಅಸೋಸಿಯೇಷನ್ ಸಹಮತ ವ್ಯಕ್ತಪಡಿಸಿದ್ದು, ಬೇಡಿಕೆಗಳು ಈ ಕೆಳಗಿನಂತಿವೆ.

ಸ್ಮಶಾನಕ್ಕಾಗಿ ಎರಡು ಎಕರೆ ಭೂಮಿ ನೀಡಬೇಕು. ಅದರಲ್ಲಿ ಒಂದು ಎಕರೆಯನ್ನು ಈ ಹಿಂದೆ ಮಂಜೂರು ಮಾಡಿದ್ದ ಪ್ರದೇಶದಲ್ಲೆ ನೀಡಬೇಕು. ಮತ್ತೊಂದು ಎಕರೆ ಜಾಗವನ್ನು ಅದೇ ಸರ್ವೆ ನಂಬರ್‌ನಲ್ಲಿ ಅತಿಕ್ರಮಣ ತೆರವುಗೊಳಿಸಿ ಸ್ಮಶಾನಕ್ಕಾಗಿ ಕಾಯ್ದಿರಿಸಬೇಕು. ಕ್ರಿಕೆಟ್ ಸಂಸ್ಥೆ ಕಾಮಗಾರಿ ನಿರ್ವಹಿಸುವಾಗ ಕಾನ್ಸಿರಾಂ ನಗರದ ಕಾರ್ಮಿಕರಿಗೆ ಹೆಚ್ಚು ಆದ್ಯತೆ ನೀಡಬೇಕು. ಕಾನ್ಸಿರಾಂ ನಗರವನ್ನು ಅಭಿವೃದ್ಧಿಗಾಗಿ ಕ್ರಿಕೆಟ್ ಸಂಸ್ಥೆ ದತ್ತು ತೆಗೆದುಕೊಳ್ಳಬೇಕು. ಕ್ರಿಕೆಟ್ ಸಂಸ್ಥೆಯ ಅಭಿವೃದ್ಧಿ ಸಮಿತಿಯಲ್ಲಿ ಪಂಚಾಯಿತಿ ಅಧ್ಯಕ್ಷರನ್ನು ಸಮಿತಿ ಸದಸ್ಯರನ್ನಾಗಿ ಮಾಡಬೇಕು.

ಕ್ರಿಕೆಟ್ ಕ್ರೀಡಾಂಗಣಕ್ಕೆ ಹೊದ್ದೂರು, ಪಾಲೆಮಾಡು ಕಾನ್ಸಿರಾಂ ನಗರದ ರಸ್ತೆ ಬಳಕೆ ಮಾಡದೆ ಅತಿಕ್ರಮಣ ತೆರವುಗೊಳಿಸಿ ಹೊಸ ರಸ್ತೆ ನಿರ್ಮಾಣ ಮಾಡಬೇಕು. ಹೋರಾಟದ ಸಂದರ್ಭ ಹೋರಾಟಗಾರರ ಮೇಲೆ ದಾಖಲಿಸಲಾದ ಮೊಕದ್ದಮೆಗಳನ್ನು ಹಿಂಪಡೆಯಬೇಕು ಎಂದು ಹೋರಾಟ ಸಮಿತಿ ತನ್ನ ಬೇಡಿಕೆಗಳನ್ನು ಸಭೆಗಳಲ್ಲಿ ಮುಂದಿಟ್ಟಿತ್ತು.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು, ಸ್ಮಶಾನಕ್ಕೆ ಎರಡು ಎಕರೆ ಭೂಮಿ ಸಂಬAಧ ಒಪ್ಪಿಗೆ ನೀಡಲಾಗಿದೆ. ಕ್ರೀಡಾಂಗಣ ಕಾಮಗಾರಿಯಲ್ಲಿ ಕಾನ್ಸಿರಾಂ ನಗರದ ಕಾರ್ಮಿಕರಿಗೆ ಆದ್ಯತೆ ನೀಡುವ ಕುರಿತು; ಕಾನ್ಸಿರಾಂ ನಗರವನ್ನು ಅಭಿವೃದ್ಧಿ ಹಿನ್ನೆಲೆ ದತ್ತು ಪಡೆಯಲು ಕ್ರಿಕೆಟ್ ಸಂಸ್ಥೆಗೆ ಸೂಚಿಸಲಾಗಿದೆ.

ಕ್ರಿಕೆಟ್ ಸ್ಟೇಡಿಯಂಗೆ ಹೊಸ ರಸ್ತೆ ನಿರ್ಮಾಣವಾಗುವವರೆಗೂ ಹೊದ್ದೂರು, ಪಾಲೆಮಾಡು ಕಾನ್ಸಿರಾಂ ರಸ್ತೆಯನ್ನೇ ಬಳಸಲಾಗುತ್ತದೆ. ಹೋರಾಟಗಾರರ ಮೇಲಿನ ಮೊಕದ್ದಮೆ ಹಿಂಪಡೆಯುವ ಸಂಬAಧ ಕ್ರಿಕೆಟ್ ಸಂಸ್ಥೆ ಹಾಗೂ ಹೋರಾಟಗಾರರು ಮಾತುಕತೆ ನಡೆಸಿ ನಿರ್ಧರಿಸುವಂತೆ ಕ್ರಮಕೈಗೊಳ್ಳಲಾಗಿದೆ. ಕ್ರಿಕೆಟ್ ಕ್ರೀಡಾಂಗಣಕ್ಕಾಗಿ ಜಿಲ್ಲಾಡಳಿತ, ಕ್ರಿಕೆಟ್ ಅಸೋಸಿಯೇಷನ್, ಗ್ರಾಮಸ್ಥರನ್ನೊಳಗೊಂಡು ಸಮನ್ವಯ ಸಮಿತಿ ರಚಿಸಿ, ಅದರಲ್ಲಿ ಗ್ರಾಮಸ್ಥರ ಪರವಾಗಿ ಪಂಚಾಯಿತಿ ಅಧ್ಯಕ್ಷರನ್ನು ಸದಸ್ಯರನ್ನಾಗಿ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಸೂಕ್ತ ಸ್ಪಂದನ ಹಾಗೂ ಭರವಸೆ ಹಿನ್ನೆಲೆಯಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದಾಗಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಅಮಿನ್ ಮೊಯ್ಸಿನ್ ತಿಳಿಸಿದ್ದಾರೆ.