ಗೋಣಿಕೊಪ್ಪಲು, ಡಿ.೩೦ : ಇಲ್ಲಿನ ಕೀರೆಹೊಳೆ, ಕೈಕೇರಿ ತೋಡು ಹಾಗೂ ಕೈತೋಡುಗಳ ಒತ್ತುವರಿ ತೆರವು ಕಾರ್ಯ ಕಂದಾಯ ಇಲಾಖೆ ಮೂಲಕ ಪ್ರಗತಿಯಲ್ಲಿದ್ದು, ಅಕ್ರಮ ಒತ್ತುವರಿದಾರರು ಸ್ವ ಇಚ್ಛೆಯಿಂದ ತೆರವುಗೊಳಿಸಲು ಹಾಗೂ ನೋಟೀಸು ನೀಡಿ ತೆರವು ಮಾಡಲು ನ್ಯಾಯಾಲಯವು ಒಂದು ತಿಂಗಳ ಕಾಲಾವಕಾಶ ನೀಡಿದೆ. ಯಾವದೇ ತಡೆಯಾಜ್ಞೆ ಇಲ್ಲ ಎಂದು ಗೋಣಿಕೊಪ್ಪಲು ಕಾವೇರಿ ಜಲಮೂಲ ಸಂರಕ್ಷಣಾ ಹೋರಾಟ ವೇದಿಕೆ ಅಧ್ಯಕ್ಷ ಪಿ.ಟಿ.ಪೂವಯ್ಯ ಹಾಗೂ ಕಾರ್ಯಾಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ ತಿಳಿಸಿದ್ದಾರೆ.

ಗೋಣಿಕೊಪ್ಪಲಿನಲ್ಲಿ ಮಾಹಿತಿ ನೀಡಿದ ಅವರು, ವೇದಿಕೆ ಪದಾಧಿಕಾರಿಗಳ ಪೂರ್ಣ ಪ್ರಮಾಣದ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದರು.

ಲಕ್ಷ÷್ಮಣ ತೀರ್ಥ ಹಾಗೂ ಮುಂದೆ ಕಾವೇರಿ ನದಿಯನ್ನು ಗೋಣಿಕೊಪ್ಪಲಿನ ಜಲಮೂಲಗಳು ಸೇರುತ್ತಿದ್ದು ಇದೀಗ ತಹಶೀಲ್ದಾರ್ ಯೋಗಾನಂದ ಅವರ ನೇತೃತ್ವದಲ್ಲಿ ೧೯೨೦ ರ ನಕಾಶೆಯಂತೆ ಇಲ್ಲಿನ ಕೀರೆಹೊಳೆ ಹಾಗೂ ತೋಡುಗಳು ಅಗಲೀಕರಣವಾಗುತ್ತಿರುವದು ಸ್ವಾಗತಾರ್ಹ. ಇದೀಗ ಕಲುಷಿತಗೊಂಡಿರುವ ಹೊಳೆ,ತೋಡಿನಿಂದ ತ್ಯಾಜ್ಯವನ್ನು ಹೊರತೆಗೆಯಬೇಕಾಗಿದೆ. ಹೊಳೆಯ ದಡದಲ್ಲಿ ಮಲಮೂತ್ರ ವಿಸರ್ಜನೆ, ಶೌಚ ನೀರನ್ನು ತೋಡಿಗೆ ಬಿಡುವದು, ಕಸ ಎಸೆಯುವದು, ಉಗುಳುವದು, ಕುರಿ, ಕೋಳಿ, ಮೀನು ತ್ಯಾಜ್ಯವನ್ನು ಹೊಳೆಗೆ ಬಿಡುವದನ್ನು ಗ್ರಾ.ಪಂ. ಕಟ್ಟುನಿಟ್ಟಿನ ಕಾನೂನು ತಂದು ನಿಷೇಧಿಸಬೇಕು. ಮುಂದೆ ಗೋಣಿಕೊಪ್ಪಲಿನ ಜಲಮೂಲವನ್ನು ಕಲುಷಿತಗೊಳಿಸುವವರಿಗೆ ದಂಡ ವಿಧಿಸುವ ಕೆಲಸ ಮಾಡಬೇಕಾಗಿದೆ ಎಂದು ಕಾರ್ಯಾಧ್ಯಕ್ಷ ಗೋಪಿ ಚಿಣ್ಣಪ್ಪ ಅಭಿಪ್ರಾಯಪಟ್ಟರು.

ಹೊಳೆ, ತೋಡುವಿನ ಇಬ್ಬದಿ ಗಿಡ ಮರಗಳನ್ನು ಬೆಳೆಸುವದು, ಪುಷ್ಪೋದ್ಯಾನ ಮಾಡುವ ನಿಟ್ಟಿನಲ್ಲಿ ನಮ್ಮ ವೇದಿಕೆ ಮುಂದೆ ಕಾರ್ಯ ಯೋಜನೆ ಹಾಕಿಕೊಳ್ಳಲಿದೆ. ಬೈಪಾಸ್ ರಸ್ತೆಯಲ್ಲಿಯೂ ನಿವೇಶನ ಗುರುತಿಸಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲಾಗುವದು. ಗ್ರಾ.ಪಂ., ತಾಲೂಕು, ಜಿಲ್ಲಾಡಳಿತ, ಜನಪ್ರತಿನಿಧಿಗಳ ಸಲಹೆ ಪಡೆದು ಗೋಣಿಕೊಪ್ಪಲು ನಗರವನ್ನು ಸ್ವಚ್ಛ ಹಾಗೂ ಮಾದರಿ ವಾಣಿಜ್ಯ ನಗರವನ್ನಾಗಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಕೋರಲಾಗುವದು ಎಂದು ಅಧ್ಯಕ್ಷ ಪಿ.ಟಿ.ಪೂವಯ್ಯ ತಿಳಿಸಿದ್ದಾರೆ.

ಪದಾಧಿಕಾರಿಗಳ ಆಯ್ಕೆ

ವೇದಿಕೆಯ ಅಧ್ಯಕ್ಷರಾಗಿ ಪುಳಿಂಜನ ಟಿ.ಪೂವಯ್ಯ, ಕಾರ್ಯಾಧ್ಯಕ್ಷರಾಗಿ ಕೊಲ್ಲೀರ ಗೋಪಿ ಚಿಣ್ಣಪ್ಪ, ಉಪಾಧ್ಯಕ್ಷರಾಗಿ ಆಪಟ್ಟಿರ ಟಾಟು ಮೊಣ್ಣಪ್ಪ, ಪ್ರಧಾನ ಕಾರ್ಯದರ್ಶಿಗಳಾಗಿ ಪಡಿಕಲ್ ಕುಸುಮಾವತಿ ಹಾಗೂ ಎನ್.ಕೆ. ನಾರಾಯಣ ಸ್ವಾಮಿ ನಾಯ್ಡು, ಸಹಕಾರ್ಯದರ್ಶಿ ಹ್ಯಾಪಿ ಶಿವು , ಖಜಾಂಚಿಯಾಗಿ ಎಸ್.ಎನ್. ಸಲ್ಮಾ, ಯೋಜನಾ ನಿರ್ದೇಶಕರಾಗಿ ತುಷಾರ್ ಕುಲಕರ್ಣಿ ಹಾಗೂ ಕೊಣಿಯಂಡ ಕಾವ್ಯ ಸಂಜು ಆಯ್ಕೆಯಾಗಿದ್ದಾರೆ. ಮಾಧ್ಯಮ ವಕ್ತಾರರಾಗಿ ಟಿ.ಎಲ್.ಶ್ರೀನಿವಾಸ್ ಹಾಗೂ ನಿರ್ದೇಶಕರಾಗಿ ಜಮ್ಮಡ ಎಸ್. ಮೋಹನ್, ಬೋಸ್, ನಾಮೇರ ದೇವಯ್ಯ, ಖಾಲಿದ್, ಕಾಡ್ಯಮಾಡ ಪೆಮ್ಮಯ್ಯ ಹಾಗೂ ಶಕುಂತಲ ಆಯ್ಕೆಯಾಗಿದ್ದಾರೆ.

ನೂತನ ಸಮಿತಿಯ ಪೂರ್ವಭಾವಿ ಸಭೆ ಜ.೨ ರಂದು ಗೋಣಿಕೊಪ್ಪಲು ಮಹಿಳಾ ಸಮಾಜದಲ್ಲಿ ನಡೆಯಲಿದೆ.