ಮಡಿಕೇರಿ, ಡಿ. ೩೧: ಕೇಂದ್ರ ಸರ್ಕಾರದ ನಿರ್ದೇಶನದಂತೆ ಕೋವಿಡ್ ಹಿನ್ನೆಲೆಯಲ್ಲಿ ೧೫ ರಿಂದ ೧೮ ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಸಂಬAಧ ರಾಜ್ಯದೆಲ್ಲೆಡೆ ಇದಕ್ಕಾಗಿ ತಯಾರಿಗಳು ನಡೆಯುತ್ತಿವೆ. ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಲ್ಲಿನ ಉಸ್ತುವಾರಿ ಸಚಿವರುಗಳು ಅಲ್ಲಿನ ಸ್ಥಳೀಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಮಕ್ಕಳ ಲಸಿಕಾಕರಣಕ್ಕೆ ತಾ. ೩ ರಂದು ಚಾಲನೆ ನೀಡುವಂತೆ ಆದೇಶಿಸಿದ್ದು, ಅದರನ್ವಯ ಕೊಡಗಿನಲ್ಲೂ ಕೂಡ ಆರೋಗ್ಯ ಇಲಾಖೆ ಈ ಸಂಬAಧ ಸಿದ್ಧತೆ ಕೈಗೊಂಡಿದೆ.

ಕೊಡಗು ಜಿಲ್ಲೆಯಲ್ಲಿ ಪಿಯು ಹಾಗೂ ಪ್ರೌಢಶಾಲೆಗಳು ಸೇರಿ ೨೫೪ ವಿದ್ಯಾಸಂಸ್ಥೆಗಳಲ್ಲಿ ಒಟ್ಟು ೨೬,೦೪೯ ವಿದ್ಯಾರ್ಥಿಗಳಿದ್ದು, ಅವರುಗಳೆಲ್ಲರಿಗೂ ಕೊರೊನಾ ಲಸಿಕೆ ನೀಡಬೇಕಾಗಿದೆ. ಪಿಯು ಹಾಗೂ ಪ್ರೌಢ ಶಾಲೆಗಳಲ್ಲೇ ಲಸಿಕೆ ವಿತರಣೆಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ತಿಳಿಸಿದ್ದಾರೆ. ಮಕ್ಕಳಿಗೆ ಲಸಿಕೆ ನೀಡುವ ಸಂದರ್ಭ ಅವಸರ ಮಾಡದೇ ಮಕ್ಕಳ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಲಸಿಕೆ ನೀಡಬೇಕಾಗಿರುವುದರಿಂದ ಸುಮಾರು ೧೩ ದಿನ ದಿನಗಳ ಅವಧಿಯನ್ನು ತೆಗೆದುಕೊಂಡು ಲಸಿಕಾ ಕಾರ್ಯವನ್ನು ಪೂರ್ಣ ಗೊಳಿಸಲಾಗುತ್ತದೆ.

ತಾ. ೩ ರಂದು ಪಾಲಿಬೆಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಮಕ್ಕಳ ಲಸಿಕಾಕರಣಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಆರೋಗ್ಯ ಇಲಾಖೆಯಿಂದ ತಂಡಗಳನ್ನು ರಚಿಸಿ ಒಂದು ದಿನಕ್ಕೆ ಇಂತಿಷ್ಟು ಶಾಲೆಗಳೆಂದು ಆಯ್ಕೆ ಮಾಡಿ ಲಸಿಕೆ ನೀಡಲಾಗುವುದು.

ಲಸಿಕೆ ಪಡೆಯುವ ಮಕ್ಕಳು ಶಾಲೆಯ ಅಥವಾ ಕಾಲೇಜಿನ ಗುರುತಿನ ಚೀಟಿಯನ್ನು ಹೊಂದಿರಬೇಕು. ಮಕ್ಕಳು ಆಧಾರ್ ಕಾರ್ಡ್ ತಂದರೂ ಅಡ್ಡಿಯಿಲ್ಲ. ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗುತ್ತದೆ. ಮೊದಲ ಲಸಿಕೆ ನೀಡಿದ ಒಂದು ತಿಂಗಳ ಬಳಿಕ ಎರಡನೇ ಲಸಿಕೆ ಹಾಕಲಾಗುತ್ತದೆ. ಶಾಲೆಗೆ ಬಾರದೆ ಮನೆಯಲ್ಲಿ ಇರುವ ಮಕ್ಕಳಿಗೆ; ಅಲೆಮಾರಿ ಮಕ್ಕಳಿಗೆ ಲಸಿಕೆ ನೀಡುವ ಸಂಬAಧ ಆರೋಗ್ಯ ಇಲಾಖೆಯ ಮೊಬೈಲ್ ಟೀಮ್, ಆಶಾಕಾರ್ಯಕರ್ತೆಯರನ್ನು ಒಳಗೊಂಡು ಖುದ್ದು ತೆರಳಿ ಲಸಿಕೆ ಹಾಕಲು ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಲಾಗುತ್ತದೆ. ಯಾವುದಾದರೂ ವಿದ್ಯಾರ್ಥಿಗೆ ಪಾಸಿಟಿವ್ ಬಂದಿದ್ದಲ್ಲಿ ಪಾಸಿಟಿವ್ ಬಂದ ದಿನದಿಂದ ೯೦ ದಿನಗಳ ಬಳಿಕ ಅವರಿಗೆ ಲಸಿಕೆ ಹಾಕಲಾಗುತ್ತದೆ ಎಂದು ವೆಂಕಟೇಶ್ ಮಾಹಿತಿ ನೀಡಿದರು.