ಕುಶಾಲನಗರ, ಡಿ.೩೦: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮೂಲಕ ಕೊಡಗು ಜಿಲ್ಲೆಯ ಐದು ಕೆರೆಗಳನ್ನು ಅಭಿವೃದ್ಧಿಗೊಳಿಸುವ ಬಗ್ಗೆ ಯೋಜನೆ ರೂಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಯೋಜನೆಯ ನಿರ್ದೇಶಕರಾದ ಡಾ. ಯೋಗೀಶ್ ತಿಳಿಸಿದ್ದಾರೆ. ಕುಶಾಲನಗರದ ಸೋಮನಾಥ ದೇವರ ಕೆರೆಯನ್ನು ಅಭಿವೃದ್ಧಿಗೊಳಿಸುವ ಕಾರ್ಯದ ಬಗ್ಗೆ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿ ಕ್ಷೇತ್ರ ಯೋಜನೆಯ ಮೂಲಕ ಈಗಾಗಲೇ ರಾಜ್ಯದಲ್ಲಿ ೨೭೫ ಕೆರೆಗಳ ಅಭಿವೃದ್ಧಿ ಕಾರ್ಯ ನಡೆದಿದೆ. ಕೊಡಗು ಜಿಲ್ಲೆಯಲ್ಲಿ ಮೂರು ಕೆರೆಗಳ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದ್ದು ಇದೀಗ ಕುಶಾಲನಗರ ಪಟ್ಟಣದ ಸೋಮೇಶ್ವರ ಕೆರೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳ ಪ್ರಮುಖರ ಸಲಹೆ ಪಡೆಯಲಾಯಿತು. ಕೆರೆಗೆ ನೇರವಾಗಿ ಸೇರುವ ಕಲುಷಿತ ನೀರನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಸಲಹೆಗಳು ಕೇಳಿಬಂದವು. ಕುಶಾಲನಗರ ಸೋಮೇಶ್ವರ ದೇವಾಲಯದ ಸಮೀಪವಿರುವ ಈ ಕೆರೆ ಸೋಮನಾಥ ದೇವರಿಗೆ ಸೇರಿದೆ. ಅಭಿವೃದ್ಧಿ ನಂತರ ದೇವಾಲಯಕ್ಕೆ ಹಸ್ತಾಂತರಿಸಿದಲ್ಲಿ ಅದರ ನಿರ್ವಹಣೆ ಮಾಡಲಾಗುವುದು ಎಂದು ಸ್ಥಳೀಯರು ಸಭೆಯಲ್ಲಿ ತಿಳಿಸಿದರು.
ಕುಶಾಲನಗರ ಸೋಮೇಶ್ವರ ದೇವಾಲಯ ಆಡಳಿತ ಸಮಿತಿ ಅಧ್ಯಕ್ಷ ಎಂ.ಕೆ. ದಿನೇಶ್ ಅವರ ಅಧ್ಯಕ್ಷತೆಯಲ್ಲಿ ಕೆರೆ ಅಭಿವೃದ್ಧಿ ಸಮಿತಿ ರಚಿಸಲಾಯಿತು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆಲುವರಾಜು ಮತ್ತಿತರರು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭ ಗ್ರಾಮೀಣಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ರೋಹಿತ್, ಕುಶಾಲನಗರ ವಲಯ ಮೇಲ್ವಿಚಾರಕರಾದ ಪೂರ್ಣಿಮಾ, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷÀ ಎಂ.ಬಿ ಸುರೇಶ್, ಸದಸ್ಯರಾದ ಡಿ.ಕೆ. ತಿಮ್ಮಪ್ಪ, ಜಯಲಕ್ಷಿö್ಮ, ಶಿವಾನಂದ, ಜಗದೀಶ್, ಪದ್ಮ, ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಎಂ ಎನ್ ಚಂದ್ರಮೋಹನ್ ಮತ್ತು ಸ್ಥಳೀಯ ಪ್ರಮುಖರು ಗ್ರಾಮೀಣಾಭಿವೃದ್ಧಿ ಸಂಘದ ಪದಾಧಿಕಾರಿಗಳು ಇದ್ದರು.