ಕುಶಾಲನಗರ, ಡಿ. ೨೯: ಕುಶಾಲನಗರ ಪಟ್ಟಣ ಪಂಚಾಯ್ತಿಯ ಸಾಮಾನ್ಯ ಸಭೆ ಪಂಚಾಯ್ತಿ ಅಧ್ಯಕ್ಷ ಬಿ.ಜೈವರ್ಧನ್ ಅಧ್ಯಕ್ಷತೆಯಲ್ಲಿ ಪಂಚಾಯ್ತಿ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷ ಜೈವರ್ಧನ್ ಮಾತನಾಡಿ, ಈಗಾಗಲೇ ಕುಶಾಲನಗರ ಪಟ್ಟಣ ಪಂಚಾಯ್ತಿ ಪುರಸಭೆಯಾಗಿ ಮೇಲ್ದರ್ಜೆಗೇರಲಿದೆ. ಇದನ್ನು ಸಾಕಾರ ಗೊಳಿಸಿದ ಶಾಸಕ ಅಪ್ಪಚ್ಚುರಂಜನ್, ಮುತುವರ್ಜಿ ವಹಿಸಿದ ಈ ಹಿಂದಿನ ಪಂಚಾಯ್ತಿಗೆ ಆಡಳಿತ ಮಂಡಳಿ, ಪ್ರಸಕ್ತ ಆಡಳಿತ ಮಂಡಳಿ ಮುಖ್ಯಾಧಿಕಾರಿ, ಸಿಬ್ಬಂದಿ ವರ್ಗ ಸೇರಿದಂತೆ ಶ್ರಮಿಸಿದ ಸರ್ವರಿಗೂ ಧನ್ಯವಾದ ಹಾಗೂ ಅಭಿನಂದನೆ ಸಲ್ಲಿಸಿದರು.

ನಾಮನಿರ್ದೇಶಿತ ಸದಸ್ಯ ನಾರಾಯಣ ಅವರ ಕೋರಿಕೆಯಂತೆ ಅಗಲಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದೇ ಸಂದರ್ಭ ನಾರಾಯಣ್ ಅವರು, ಒಂದು ವರ್ಷ ಅವಧಿ ಪೂರ್ಣಗೊಳಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷರ ಉತ್ತಮ ಕಾರ್ಯಗಳಿಗೆ ಮೆಚ್ಚುಗೆ ಸೂಚಿಸಿದರು.

ಕನ್ನಡ ಧ್ವಜ ಸುಟ್ಟು ಪುಂಡಾಟಿಕೆ ಮೆರೆದ ಎಂಇಎಸ್ ವರ್ತನೆಗೆ ಖಂಡನೆ ವ್ಯಕ್ತಪಡಿಸಿ ನಿರ್ಣಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಳುಹಿಸಲು ಸದಸ್ಯರಾದ ವಿ.ಎಸ್. ಆನಂದಕುಮಾರ್ ಸೂಚಿಸಿದರು.

ಸದಸ್ಯೆ ರೇಣುಕಾ ಮಾತನಾಡಿ, ಪುರಸಭೆಗೆ ಶ್ರಮಿಸಿದ ಸರ್ವರಿಗೂ ಧನ್ಯವಾದ ಸಲ್ಲಿಸಲು ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.

ಸದಸ್ಯ ಶಂಭುಲಿAಗಪ್ಪ ಮಾತನಾಡಿ, ಕಛೇರಿಯಲ್ಲಿ ಮಧ್ಯ ವರ್ತಿಗಳ ಹಾವಳಿ ನಿರಂತರವಾಗಿ ಮುಂದುವರೆದಿದೆ. ಈ ಬಗ್ಗೆ ಹಲವು ಬಾರಿ ಸಭೆಯ ಗಮನಕ್ಕೆ ತಂದರೂ ಮಧ್ಯವರ್ತಿಗಳ ಪ್ರಭಾವ ಯಥಾಸ್ಥಿತಿ ಯಲ್ಲಿದೆ. ಈ ಕುರಿತು ಸಾರ್ವಜನಿಕರು ಜನಪ್ರತಿನಿಧಿಗಳು ಮತ್ತು ಅಧಿಕಾರಿ ಗಳನ್ನು ಹೀಯಾಳಿಸುತ್ತಿರುವುದು ಅವಮಾನಕರ ಸಂಗತಿ ಎಂದರು.

ಪAಚಾಯ್ತಿ ಅಭಿಯಂತರರು ಹಲವು ಕಾಮಗಾರಿಗಳಲ್ಲಿ ಕರ್ತವ್ಯ ಲೋಪ ಎಸಗಿದ್ದು ಕೋಟ್ಯಂತರ ರೂ. ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ ಎಂದು ಸದಸ್ಯ ಡಿ.ಕೆ.ತಿಮ್ಮಪ್ಪ ಆಕ್ರೋಶ ವ್ಯಕ್ತಪಡಿಸಿದರು. ಯುಜಿಡಿ ಪೂರ್ಣಗೊಳ್ಳದ ಸ್ಥಳದಲ್ಲಿ ರಸ್ತೆ, ಚರಂಡಿ ಕಾಮಗಾರಿ ಕೈಗೊಂಡು ಅಚಾತುರ್ಯ ಎಸಗಿದ್ದಾರೆ. ಗುಂಡೂರಾವ್ ಬಡಾವಣೆ ಮೂಲಕ ಪುನಃ ಬಡಾವಣೆಗೆ ಸಂಪರ್ಕ ಕಲ್ಪಿಸಲು ತಾವರೆ ಕೆರೆ ಸ್ಥಳ ಬಳಸಿಕೊಂಡು ರಸ್ತೆ ನಿರ್ಮಿಸಲಾಗಿತ್ತು. ಇದನ್ನು ಪರಿಶೀಲಿಸಿ ಈ ಹಿಂದಿನ ಜಿಲ್ಲಾಧಿಕಾರಿ ಶ್ರೀವಿದ್ಯಾ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ರಸ್ತೆ ತೆರವುಗೊಳಿಸಿದ್ದರು. ಈ ಬಗ್ಗೆ ಸೂಕ್ತ ತನಿಖೆಯಾಗಬೇಕಿದೆ ಎಂದು ತಿಮ್ಮಪ್ಪ ಮತ್ತು ಕೆ.ಜಿ.ಮನು ಆಗ್ರಹಿಸಿದರು.

ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಂಬಗಳು ಮತ್ತು ಟ್ರಾನ್ಸ್ ಫಾರ್ಮರ್ ಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಸೆಸ್ಕ್ ಅಧಿಕಾರಿಗೆ ಸದಸ್ಯರಾದ ರೇಣುಕಾ, ಸುಂದರೇಶ್, ತಿಮ್ಮಪ್ಪ ಸೂಚಿಸಿದರು.

ಯುಜಿಡಿ ಕಾಮಗಾರಿ ಮತ್ತು ಹಾರಂಗಿ ಜಲಾಶಯದಿಂದ ನಿರಂತರ ಕುಡಿವ ನೀರಿನ ಯೋಜನೆ ಅನುಷ್ಠಾನದ ಬಗ್ಗೆ ಒಳಚರಂಡಿ ಮಂಡಳಿ ಅಭಿಯಂತರ ಆನಂದ್ ಸಭೆಗೆ ಮಾಹಿತಿ ನೀಡಿದರು.

ಪಪಂ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಮಾತನಾಡಿ, ರೂ. ೩.೨೦ ಕೋಟಿ ವೆಚ್ಚದಲ್ಲಿ ಗುಂಡುರಾವ್ ಬಡಾವಣೆಯಲ್ಲಿ ಯುಜಿಡಿ, ಕುಡಿಯುವ ನೀರಿನ ಪೂರೈಕೆ, ರೂ. ೮೭ ಲಕ್ಷ ವೆಚ್ಚದಲ್ಲಿ ಭುವನಗಿರಿ ಕಸ ವಿಲೇವಾರಿ ಘಟಕ, ತ್ಯಾಜ್ಯ ನಿರ್ವಹಣೆಗೆ ಯಂತ್ರೋಪಕರಣಗಳು, ಜೆಸಿಬಿ, ಆಟೋಗಳ ಖರೀದಿ, ಪಾರಂಪರಿಕ ತ್ಯಾಜ್ಯನಿರ್ವಹಣೆ, ರೂ. ೨.೮೭ ಕೋಟಿ ವೆಚ್ಚದಲ್ಲಿ ಅಪೂರ್ಣವಾಗಿರುವ ಕಚೇರಿ ಕಟ್ಟಡ ಕಾಮಗಾರಿ ಕೈಗೊಳ್ಳಲು ಸೇರಿದಂತೆ ಅಂದಾಜು ರೂ. ೧೦ ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ಈ ಹಿಂದಿನ ಮುಖ್ಯಾಧಿಕಾರಿ ಸುಜಯ್ ಕುಮಾರ್ ಯೋಗಾನಂದ ಬಡಾವಣೆ ಸೇರಿದಂತೆ ಕೆಲವು ಬಡಾವಣೆಗಳ ನಿರ್ಮಾಣ ಸಂದರ್ಭ ಹಗರಣ ನಡೆಸಿದ್ದು ಇದರಿಂದ ಪ್ರಸಕ್ತ ಬಡಾವಣೆ ಮಾಲೀಕರಿಗೆ ಕಾನೂನು ತೊಡಕುಗಳು ಎದುರಾಗಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಸಭೆಯಲ್ಲಿ ಪ.ಪಂ. ಉಪಾಧ್ಯಕ್ಷೆ ಸುರಯ್ಯಭಾನು, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ. ಸುರೇಶ್, ಕಾನೂನು ಸಲಹೆಗಾರ ನಾಗೇಂದ್ರಬಾಬು, ಸದಸ್ಯರಾದ ಪ್ರಮೋದ್ ಮುತ್ತಪ್ಪ, ಶೇಖ್ ಕಲೀಮುಲ್ಲಾ ಹೊರತುಪಡಿಸಿ ಉಳಿದ ಸದಸ್ಯರುಗಳು, ಆರೋಗ್ಯಾಧಿಕಾರಿ ಉದಯ್ ಕುಮಾರ್, ಅಭಿಯಂತರೆ ಶ್ರೀದೇವಿ, ಸಿಬ್ಬಂದಿಗಳಾದ ನಂಜುAಡ, ರಾಘವ ಮತ್ತಿತರರು ಇದ್ದರು.