ಕೂಡಿಗೆ, ಡಿ. ೨೮: ಕೂಡಿಗೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ೨೦೧೯-೨೦ನೇ ಸಾಲಿನ ವಿಶ್ವಾಸ ಕಿರಣ್ ವಿಶೇಷ ಆಂಗ್ಲ ಭಾಷಾ ಕಲಿಕಾ ತರಬೇತಿಗೆ ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಆಂಗ್ಲ ಭಾಷಾ ತರಬೇತಿ ಕಾರ್ಯ ಕ್ರಮವು ಸರಕಾರಿ ಪದವಿಪೂರ್ವ ಕಾಲೇಜಿನ ಹೊಸ ಯೋಜನೆ ಆಗಿದ್ದು, ಇದರಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷದ ಪರೀಕ್ಷೆಯಲ್ಲಿ ಆಂಗ್ಲ ಭಾಷೆಯ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಲು ಅನುಕೂಲವಾಗುವುದು ಎಂದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಎಸ್‌ಸಿಪಿ/ ಟಿಎಫ್‌ಪಿ ಯೋಜನೆಯ ಅಡಿಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯ ವಿಷಯಕ್ಕೆ ಅನುಕೂಲ ವಾಗುವಂತಹ ಯೋಜನೆಯಾಗಿದ್ದು ಇದರ ಸದುಪಯೋಗವನ್ನು ಕಾಲೇಜಿನ ವಿಶೇಷ ತರಬೇತಿ ಸಮಯದಲ್ಲಿ ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಆಂಗ್ಲ ಭಾಷೆಯ ಉಪನ್ಯಾಸಕಿ ಕಾವೇರಮ್ಮ ಪ್ರಾಸ್ತಾವಿಕವಾಗಿ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಬಸಪ್ಪ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಎಂ.ಬಿ. ಮಹೇಶ್, ಉಪನ್ಯಾಸಕರಾದ ನಾಗಪ್ಪ, ರಮೇಶ್, ಹೇಮರಾಜ್, ಕಾವೇರಮ್ಮ, ಭಾವನಾ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.