ರಾಜ್ಯದಲ್ಲಿ ಕೋವಿಡ್ ಸಂಖ್ಯೆ ದಿಢೀರ್ ಏರಿಕೆ:೬ ಸಾವು!
ಬೆಂಗಳೂರು, ಡಿ. ೨೯: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದ್ದು, ಕಳೆದ ೨೪ ಗಂಟೆಯಲ್ಲಿ ೫೬೬ ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ ೩೦,೦೫,೭೯೮ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಮಹಾಮಾರಿ ಕೊರೊನಾದಿಂದ ೬ ಮಂದಿ ಮೃತಪಟ್ಟಿದ್ದು, ಇದರೊಂದಿಗೆ ಸಾವಿನ ಸಂಖ್ಯೆ ೩೮,೩೨೪ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನಲ್ಲಿ ೪೦೦ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ ೧೨,೬೨,೩೯೭ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಕೊರೊನಾದಿಂದ ನಾಲ್ವರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ. ರಾಜ್ಯದಲ್ಲಿ ೨೪೫ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿAದ ಚೇತರಿಸಿಕೊಂಡವರ ಸಂಖ್ಯೆ ೨೯,೫೯,೬೭೪ಕ್ಕೆ ಏರಿಕೆಯಾಗಿದೆ. ಇನ್ನು ೭,೭೭೧ ಸಕ್ರಿಯ ಪ್ರಕರಣಗಳಿವೆ.
ಕರ್ನಾಟಕ ಬಂದ್ ಕೈಬಿಡಲು ಸಿಎಂ ಮನವಿ
ಬೆಂಗಳೂರು, ಡಿ. ೨೯: ಕನ್ನಡ ಸಂಘಟನೆಗಳು ತಾ. ೩೧ ರಂದು ಕರೆದಿರುವ ಕರ್ನಾಟಕ ಬಂದ್‌ನ್ನು ಕೈಬಿಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮನವಿ ಮಾಡಿದರು. ಅವರು ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಪ್ರಕರಣಕ್ಕೆ ಸಂಬAಧಿಸಿದAತೆ ಕನ್ನಡ ವಿರೋಧಿಗಳ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಎಂಇಎಸ್ ಸಂಘಟನೆಯನ್ನು ನಿಷೇಧಿಸುವ ಬಗ್ಗೆ ಕಾನೂನು ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು. ಕರ್ನಾಟಕ ಬಂದ್‌ಗೆ ಕರೆ ಕೊಡುವುದು ಸೂಕ್ತವಲ್ಲ. ಬಂದ್ ಮಾಡುವುದು ಸಮಸ್ಯೆಗಳಿಗೆ ಉತ್ತರವಲ್ಲ. ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಂದ್ ಆಚರಣೆಯನ್ನು ಕೈಬಿಡಲು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮನವಿ ಮಾಡಿದರು.
ಜಾರ್ಖಂಡ್‌ನಲ್ಲಿ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಬೆಲೆ ಇಳಿಕೆ
ರಾಂಚಿ, ಡಿ. ೨೯: ಜಾರ್ಖಂಡ್ ದ್ವಿಚಕ್ರ ವಾಹನ ಸವಾರರಿಗೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಬಂಪರ್ ಕೊಡುಗೆ ನೀಡಿದ್ದು, ಪೆಟ್ರೋಲ್ ಬೆಲೆ ಲೀಟರ್‌ಗೆ ಬರೋಬ್ಬರಿ ೨೫ ರೂಪಾಯಿ ಇಳಿಕೆ ಮಾಡಿದ್ದಾರೆ. ರಾಜ್ಯ ಸರ್ಕಾರ ಬುಧವಾರ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಿನ ರಿಯಾಯಿತಿ ಘೋಷಿಸಿದೆ. ಆದರೆ ಇದು ದ್ವಿಚಕ್ರ ವಾಹನಗಳಿಗೆ ಮಾತ್ರ ಎಂದು ಸ್ಪಷ್ಟಪಡಿಸಿದೆ. ಜಾರ್ಖಂಡ್ ಸರ್ಕಾರವು ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಸವಾರರಿಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ ೨೫ ರೂಪಾಯಿ ರಿಯಾಯಿತಿ ನೀಡಲು ನಿರ್ಧರಿಸಿದೆ ಎಂದು ಸಿಎಂ ಸೊರೆನ್ ಅವರು ತಿಳಿಸಿದ್ದಾರೆ. ಮುಂದಿನ ವರ್ಷ ಜನವರಿ ೨೬ ರಿಂದ ಹೊಸ ದರಗಳು ಜಾರಿಗೆ ಬರಲಿವೆ ಎಂದು ಸೊರೆನ್ ಹೇಳಿದ್ದಾರೆ. ಸೊರೆನ್ ಸರ್ಕಾರ ಇಂದಿಗೆ ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಿದ್ದಾರೆ. ೨೦೧೯ರ ವಿಧಾನಸಭಾ ಚುನಾವಣೆಯ ನಂತರ ಸೊರೊನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎA) ಅಧಿಕಾರಕ್ಕೆ ಬಂದ್ದಿತ್ತು.
ಪ್ರಧಾನಿ ಮೋದಿ ಯುಎಇ ಪ್ರವಾಸ ಮುಂದೂಡಿಕೆ
ನವದೆಹಲಿ, ಡಿ. ೨೯: ದೇಶದಲ್ಲಿ ಕೊರೊನಾ ಹೊಸ ರೂಪಾಂತರಿ ತಳಿ ಓಮಿಕ್ರಾನ್ ಹೆಚ್ಚಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಯುಎಇ ಪ್ರವಾಸ ಮುಂದೂಡಿಕೆಯಾಗಿದೆ. ಜನವರಿ ೬ ರಂದು ಪ್ರಧಾನಿ ಮೋದಿ ಯುಎಇ ಮತ್ತು ಕುವೈತ್‌ಗೆ ತೆರಳಬೇಕಿತ್ತು. ಆದರೆ ಓಮಿಕ್ರಾನ್ ಹೆಚ್ಚಳ ಹಿನ್ನೆಲೆಯಲ್ಲಿ ಪ್ರವಾಸ ಮುಂದೂಡಿಕೆಯಾಗಿದ್ದು, ಫೆಬ್ರವರಿಯಲ್ಲಿ ಮರು ದಿನಾಂಕ ನಿಗದಿಯಾಗುವ ಸಾಧ್ಯತೆಗಳಿವೆ. ಓಮಿಕ್ರಾನ್ ರೂಪಾಂತರ ಜಗತ್ತಿನಾದ್ಯಂತ ಉಲ್ಬಣಗೊಂಡಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್ ಮೇಲೆ ಈ ವೈರಸ್ ತೀವ್ರವಾಗಿ ಪರಿಣಾಮ ಬೀರುತ್ತಿದೆ. ಇನ್ನು ಅಮೆರಿಕಾದಲ್ಲಿ ಡೆಲ್ಟಾಗಿಂತ ಓಮಿಕ್ರಾನ್ ಪ್ರಬಲ ವೈರಸ್ ಆಗಿ ಬದಲಾಗಿದೆ. ಭಾರತದಲ್ಲಿ ಕೊರೊನಾ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇನ್ನು ಯುಎಇಯಲ್ಲಿ ಸೋಮವಾರ ೧,೭೩೨ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.
ಮೈಸೂರಿನಲ್ಲಿ ಮತ್ತೊಂದು ಓಮಿಕ್ರಾನ್ ಪ್ರಕರಣ ಪತ್ತೆ
ಮೈಸೂರು, ಡಿ. ೨೯: ಮೈಸೂರಿನಲ್ಲಿ ಮತ್ತೊಂದು ಓಮಿಕ್ರಾನ್ ಪ್ರಕರಣ ವರದಿಯಾಗಿದ್ದು, ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿನಿಯೊಬ್ಬರಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. ಈ ಹಿಂದೆ ಮೈಸೂರಿನ ೯ ವರ್ಷದ ಬಾಲಕಿಗೆ ಕೋವಿಡ್-೧೯ ವೈರಸ್‌ನ ನೂತನ ರೂಪಾಂತರ ದೃಢಪಟ್ಟಿತ್ತು. ಈ ಘಟನೆ ಇನ್ನೂ ಹಸಿರಾಗಿರುವಂತೆಯೇ ಮತ್ತೊಂದು ಪ್ರಕರಣ ವರದಿಯಾಗಿದೆ. ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿನಿಯೊಬ್ಬರ ಓಮಿಕ್ರಾನ್ ಟೆಸ್ಟ್ ವರದಿ ಪಾಸಿಟಿವ್ ಎಂದು ದೃಢಪಟ್ಟಿದೆ. ಇದೀಗ ಸೋಂಕಿತ ರೋಗಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ಸಂಪರ್ಕಗಳನ್ನು ಪರೀಕ್ಷಿಸಲು ಅಧಿಕಾರಿಗಳು ಪತ್ತೆಹಚ್ಚುತ್ತಿದ್ದಾರೆ. ಡಿಸೆಂಬರ್ ೨೦ ರಂದು ಆಗಮಿಸಿದ ಈ ಯುವತಿ ತನ್ನ ಮಾದರಿಗಳನ್ನು ಪರೀಕ್ಷೆಗೆ ನೀಡಿದ್ದಳು. ಬಳಿಕ ವರದಿ ಪಾಸಿಟಿವ್ ಬಂದಿತ್ತು. ನಂತರ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ಗಾಗಿ ಕಳುಹಿಸಲಾಗಿತ್ತು. ಇದೀಗ ಈ ವರದಿಯಲ್ಲಿಯೂ ಪಾಸಿಟಿವ್ ಬಂದಿದೆ. ಆರೋಗ್ಯ ಅಧಿಕಾರಿಗಳು ಈ ವಿಷಯದ ಬಗ್ಗೆ ಮೌನವಾಗಿದ್ದರೂ, ನಗರದಲ್ಲಿ ಪದವಿ ಕೋರ್ಸ್ ಅನ್ನು ಅನುಸರಿಸುತ್ತಿರುವ ತಾಂಜಾನಿಯಾದ ವಿದ್ಯಾರ್ಥಿನಿಗೆ ಓಮಿಕ್ರಾನ್ ರೂಪಾಂತರ ದೃಢಪಟ್ಟಿದೆ. ಆ ಮೂಲಕ ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ೩೯ಕ್ಕೇರಿದೆ ಎಂದು ಮೂಲಗಳು ತಿಳಿಸಿವೆ.
ಶಾಲಾ ಮಕ್ಕಳ ಮೇಲೆ ಜೇನು ದಾಳಿ
ಕಾರವಾರ, ಡಿ. ೨೯: ಶಾಲೆಗೆ ಹೋಗುತ್ತಿದ್ದ ೨೦ಕ್ಕೂ ಹೆಚ್ಚು ಮಕ್ಕಳ ಮೇಲೆ ಜೇನು ನೊಣಗಳ ಗುಂಪು ದಾಳಿ ಮಾಡಿದ ಪರಿಣಾಮ ೨೦ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ದಕ್ಷಿಣ ಕನ್ನಡದ ಕಾರವಾರ ದಲ್ಲಿ ನಡೆದಿದೆ. ಕಾರವಾರ ತಾಲೂಕಿನ ಕಿನ್ನರ ಗ್ರಾಮದ ನ್ಯೂ ಹೈಸ್ಕೂಲ್‌ನಲ್ಲಿ ಈ ಘಟನೆ ನಡೆದಿದ್ದು, ಬೆಳಿಗ್ಗೆ ಶಾಲೆಗೆ ಮಕ್ಕಳು ಹೋಗುತ್ತಿರುವಾಗ ಏಕಾಏಕಿ ಶಾಲೆಯ ಪಕ್ಕದಲ್ಲೇ ಇರುವ ತೆಂಗಿನಮರದಲ್ಲಿ ಗೂಡುಕಟ್ಟಿದ್ದ ಜೇನುನೊಣ ದಾಳಿ ಮಾಡಿದೆ. ಪರಿಣಾಮ ೨೦ಕ್ಕೂ ಹೆಚ್ಚು ಮಕ್ಕಳಿಗೆ ಜೇನು ಕಡಿದಿದೆ. ತಕ್ಷಣಕ್ಕೆ ೧೬ ಜನರು ಮಕ್ಕಳನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದಲ್ಲದೇ ಗ್ರಾಮದ ಓರ್ವ ಪುರುಷ ಹಾಗೂ ಮಹಿಳೆಗೂ ಜೇನು ಕಚ್ಚಿದ್ದು, ಗಂಭೀರ ಗಾಯಗೊಂಡ ಇವರನ್ನೂ ಸಹ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ವಿಷಯ ತಿಳಿದ ಕಾರವಾರದ ಶಾಸಕಿ ರೂಪಾಲಿ ನಾಯ್ಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಮಕ್ಕಳ ಸ್ಥಿತಿಗತಿ ವಿಚಾರಿಸಿದರು.
ರೂ. ೧೭,೫೦೦ ಕೋಟಿ ಮೌಲ್ಯದ ೨೩ ಯೋಜನೆಗೆ ಚಾಲನೆ
ಡೆಹ್ರಾಡೂನ್, ಡಿ. ೨೯: ಡಿಸೆಂಬರ್ ೩೦ ರಂದು ಉತ್ತರಾಖಂಡಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ, ರೂ. ೧೭೫೦೦ ಕೋಟಿಗೂ ಹೆಚ್ಚು ಮೌಲ್ಯದ ೨೩ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಉತ್ತರಾಖಂಡದ ಹಲ್ಡವಾನಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ರೂ. ೧೭೫೦೦ ಕೋಟಿ ಮೌಲ್ಯದ ೨೩ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನರವೇರಿಸಲಿದ್ದಾರೆ. ೨೩ ಯೋಜನೆಗಳ ಪೈಕಿ ೧೪೧೦೦ ಕೋಟಿ ರೂ.ಗೂ ಅಧಿಕ ಮೊತ್ತದ ೧೭ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಲಿದೆ. ಈ ಯೋಜನೆಗಳು ನೀರಾವರಿ, ರಸ್ತೆ, ವಸತಿ, ಆರೋಗ್ಯ ಮೂಲಸೌಕರ್ಯ, ಕೈಗಾರಿಕೆ, ನೈರ್ಮಲ್ಯ, ಕುಡಿಯುವ ನೀರು ಸರಬರಾಜು ಸೇರಿದಂತೆ ರಾಜ್ಯದಾದ್ಯಂತ ವ್ಯಾಪಕ ಶ್ರೇಣಿಯ ಕ್ಷೇತ್ರಗಳು/ಪ್ರದೇಶಗಳನ್ನು ಒಳಗೊಂಡಿವೆ. ಉದ್ಘಾಟನೆಗೊಳ್ಳುತ್ತಿರುವ ಯೋಜನೆಗಳ ಒಟ್ಟು ವೆಚ್ಚ ರೂ. ೩೪೦೦ ಕೋಟಿ ಆಗಿದೆ. ಸುಮಾರು ೫೭೫೦ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಲಖ್ವಾರ್ ವಿವಿಧೋದ್ದೇಶ ಯೋಜನೆಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಯೋಜನೆಗಳಿಗೆ ಆದ್ಯತೆ ನೀಡುವ ಪ್ರಧಾನಮಂತ್ರಿಯವರ ದೃಷ್ಟಿಕೋನವು ಯೋಜನೆಯ ಶಂಕುಸ್ಥಾಪನೆಯ ಹಿಂದಿನ ಶಕ್ತಿಯಾಗಿದೆ. ರಾಷ್ಟಿçÃಯ ಪ್ರಾಮುಖ್ಯತೆಯ ಈ ಯೋಜನೆಯು ಸುಮಾರು ೩೪,೦೦೦ ಹೆಕ್ಟೇರ್ ಹೆಚ್ಚುವರಿ ಭೂಮಿಗೆ ನೀರಾವರಿ ಸೌಲಭ್ಯಕ್ಕೆ ಅನುವು ಮಾಡಿಕೊಡುತ್ತದೆ, ೩೦೦ ಮೆಗಾವ್ಯಾಟ್ ಜಲ ವಿದ್ಯುತ್ ಉತ್ಪಾದಿಸುತ್ತದೆ ಮತ್ತು ಉತ್ತರಾಖಂಡ, ಉತ್ತರ ಪ್ರದೇಶ, ಹರಿಯಾಣ, ದೆಹಲಿ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನ ಸೇರಿ ಆರು ರಾಜ್ಯಗಳಿಗೆ ಕುಡಿಯುವ ನೀರನ್ನೂ ಪೂರೈಸುತ್ತದೆ.