ಚೆಯ್ಯಂಡಾಣೆ, ಡಿ. ೨೯: ಕೊಡಗಿನ ಇತಿಹಾಸ ಪ್ರಸಿದ್ಧ ಯಾತ್ರ ಸ್ಥಳ ಎಮ್ಮೆಮಾಡು ಗ್ರಾಮ ಪಂಚಾಯಿತಿಗೆ ಒಳಪಟ್ಟ ನೆಲಜಿ ಹಾಗೂ ಅಯ್ಯಂಗೇರಿ ಸಂಪರ್ಕ ಕಲ್ಪಿಸುವ ಪಡಿಯಾಣಿ ಎಮ್ಮೆಮಾಡು ಮುಖ್ಯರಸ್ತೆ ಹದಗೆಟ್ಟು ವರ್ಷಗಳೇ ಕಳೆದರೂ ಸಂಬAಧಪಟ್ಟವರು ದುರಸ್ತಿಪಡಿಸದೆ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ.

ಈ ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಖಾಸಗಿ ಶಾಲೆಗಳ ಬಸ್‌ಗಳು ದೈನಂದಿನ ಸಂಚರಿಸುತ್ತಿದೆ. ರಸ್ತೆ ದುರಸ್ತಿಪಡಿಸದೆ ಶಾಲಾ ಬಸ್ ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ.

೨೦೨೨ ಮಾರ್ಚ್ನಲ್ಲಿ ಎಮ್ಮೆಮಾಡು ಊರೂಸ್ ಕೂಡ ನಡೆಯಲಿದ್ದು, ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಿಂದ ಹಾಗೂ ನೆರೆಯ ಜಿಲ್ಲೆಗಳಿಂದ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದ್ದು, ಕೂಡಲೇ ಈ ರಸ್ತೆ ದುರಸ್ತಿ ಪಡಿಸಲು ಗ್ರಾಮಸ್ಥರು ಕೋರಿಕೊಂಡಿದ್ದಾರೆ.

ಪಡಿಯಾಣಿ ಬಿಜೆಪಿ ಸ್ಥಾಯಿ ಸಮಿತಿಯ ಅಧ್ಯಕ್ಷ ಕೊಟೇರ ಕೆ.ಪಿ. ಸುಬ್ರಮಣಿಯವರ ಅಭಿಪ್ರಾಯ ಬಯಸಿದಾಗ ಈ ರಸ್ತೆ ಸುಮಾರು ೭ ವರ್ಷದಿಂದ ದುರಸ್ತಿ ಕಂಡಿಲ್ಲ. ವೀರಾಜಪೇಟೆ ಶಾಸಕ ಕೆ.ಜಿ. ಬೋಪ್ಪಯ್ಯನವರಿಗೂ ಹಾಗೂ ಇಂಜಿನಿಯರ್‌ಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದು, ಯಾವುದೇ ಸ್ಪಂದನೆ ಲಭಿಸಿಲ್ಲ. ಈ ರಸ್ತೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಹಾಗೂ ಕೆಲವಾರು ಖಾಸಗಿ ಬಸ್‌ಗಳ ಓಡಾಟ ಇತ್ತು. ರಸ್ತೆಯ ದುಸ್ಥಿತಿಯಿಂದ ಬಸ್ ಕೂಡ ಸರಿಯಾಗಿ ಬರುತ್ತಿಲ್ಲ. ಪ್ರಸ್ತುತ ದಿನನಿತ್ಯ ವಿರಳ ಸಂಖ್ಯೆಯ ಬಸ್‌ಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಹಾಗೂ ಸ್ಥಳೀಯ ನಾಗರಿಕರಿಗೆ ತೀವ್ರ ತೊಡಕಾಗಿದೆ. ಆದ್ದರಿಂದ ರಸ್ತೆ ದುರಸ್ತಿಪಡಿಸಿ ಪ್ರಯಾಣಿಕರ ಅಗತ್ಯತೆಗನುಸಾರ ಬಸ್ಸುಗಳ ಸಂಖ್ಯೆ ಹೆಚ್ಚಿಸಬೇಕು. ತಪ್ಪಿದಲ್ಲಿ ಸ್ಥಳೀಯ ಗ್ರಾಮಸ್ಥರ ಹಾಗೂ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಾಪೋಕ್ಲು - ಭಾಗಮಂಡಲ ಮುಖ್ಯ ರಸ್ತೆಯನ್ನು ಬಂದ್ ಮಾಡಿ ರಸ್ತೆ ತಡೆ ನಡೆಸಬೇಕಾಗಬಹುದೆಂದು ಪಡಿಯಾಣಿ ಬಿಜೆಪಿ ಸ್ಥಾಯಿ ಸಮಿತಿ ಅಧ್ಯಕ್ಷ ಕೊಟೇರ ಕೆ.ಪಿ. ಸುಬ್ರಮಣಿ ಅಭಿಪ್ರಾಯಿಸಿದ್ದಾರೆ.

ಕೊಡಗಿನ ಪ್ರಮುಖ ಆಧ್ಯಾತ್ಮಿಕ ಕೇಂದ್ರ ಈ ಊರಿನಲ್ಲಿದ್ದು, ಕಳೆದ ಹಲವಾರು ವರ್ಷಗಳಿಂದ ಈ ರಸ್ತೆ ಹದಗೆಟ್ಟಿದ್ದು, ವಾಹನ ಸಂಚಾರ ದುಸ್ತರವಾಗಿದೆ. ದಿನನಿತ್ಯ ಅಪಘಾತಗಳು ನಡೆಯುತ್ತಿವೆ.

ಎಮ್ಮೆಮಾಡು ಮುಖ್ಯರಸ್ತೆಯ ಕಾಮಗಾರಿ ಕೂಡ ಅರ್ಧದಲ್ಲೇ ನಿಂತಿದ್ದು, ಸುಮಾರು ೩೦೦ ಮೀಟರ್ ರಸ್ತೆಯೇ ಇಲ್ಲದಂತಾಗಿದೆ. ಇಲ್ಲಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಸೆಕೆಂಡರಿ ಮದರಸ, ಜುಮಾ ಮಸೀದಿ, ದರ್ಗಾ ಕಾರ್ಯಾಚರಿಸುತ್ತಿದ್ದು ರಸ್ತೆಯ ಅವಸ್ಥೆ ಮಾತ್ರ ಶೋಚನೀಯವಾಗಿದೆ. ಹಲವಾರು ಬಾರಿ ಸಂಬAಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಕೂಡ ಯಾವುದೇ ಪರಿಹಾರವಾಗಲಿಲ್ಲ. ಇದೇ ರಸ್ತೆಯ ಅಭಿವೃದ್ಧಿಗೆ ೨೦ ಲಕ್ಷ ಮಂಜೂರಾಗಿದ್ದರೂ ಕಾಮಗಾರಿ ಕೈಗೊಂಡಿಲ್ಲ. ಅವ್ಯವಹಾರ ನಡೆದಿರುವ ಸಂಶಯ ಕೂಡ ಮೂಡುತ್ತಿದೆ. ಆದುದರಿಂದ ಸಂಬAಧಪಟ್ಟ ಮೇಲಾಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಕಾಮಗಾರಿ ಆರಂಭಿಸಿ ರಸ್ತೆ ದುರಸ್ತಿ ಪಡಿಸಲು ಸ್ಥಳೀಯ ಗ್ರಾ.ಪಂ. ಸದಸ್ಯ ಚಕ್ಕೇರ ಇಸ್ಮಾಯಿಲ್ ಆಗ್ರಹಿಸಿದ್ದಾರೆ.

- ಅಶ್ರಫ್ ಚೆಯ್ಯಂಡಾಣೆ