ಕೂಡಿಗೆ, ಡಿ. ೨೮: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಸಮೀಪದ ಸುಂದರ ನಗರದ ಕೈಗಾರಿಕಾ ಬಡಾವಣೆಯಲ್ಲಿರುವ ಕರ್ನಾಟಕ ರಾಜ್ಯ ಪಾನೀಯ ನಿಗಮದ ಘಟಕದ ಗೋದಾಮಿನಲ್ಲಿ ಮಾರಾಟವಾಗದೆ ಅವಧಿ ಮೀರಿ ಉಳಿದ, ಮಾನವ ಸೇವನೆಗೆ ಯೋಗ್ಯವಲ್ಲದ ರೂ ೨.೯೨ ಲಕ್ಷ ಮೌಲ್ಯದ ಮದ್ಯವನ್ನು ನಾಶಪಡಿಸಲಾಯಿತು.
ಇಲಾಖೆಯ ಸೋಮವಾರಪೇಟೆ ತಾಲೂಕು ಉಪ ಅಧೀಕ್ಷಕಿ ಆರ್.ಎಂ. ಚೈತ್ರಾ ನೇತೃತ್ವದಲ್ಲಿ ರೂ. ೨.೯೨ ಲಕ್ಷ ಮೌಲ್ಯದ ಅವಧಿ ಮೀರಿದ ೧೫೦ ಬಾಕ್ಸ್ ವಿವಿಧ ಕಂಪನಿಯ ಬಿಯರ್ ಹಾಗೂ ೩೨ ಬಾಕ್ಸ್ ವೈನ್ ಮತ್ತು ವಿಸ್ಕಿಯನ್ನು ಅಧಿಕಾರಿಗಳ ಸಮ್ಮುಖದಲ್ಲಿ ಗುಂಡಿಗೆ ಸುರಿದು ನಾಶಪಡಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಎಸ್.ಬಿ.ಸಿ.ಎಲ್. ಘಟಕದ ವ್ಯವಸ್ಥಾಪಕ ಎಸ್. ರಾಜು, ಘಟಕದ ಮೇಲುಸ್ತುವಾರಿ ಅಬಕಾರಿ ಸಬ್ ಇನ್ಸ್ಪೆಕ್ಟರ್ ಬಿ.ಎಸ್. ಲೋಕೇಶ್ ಸೇರಿದಂತೆ ಅಬಕಾರಿ ಸಿಬ್ಬಂದಿಗಳು ಇದ್ದರು.