ಸೋಮವಾರಪೇಟೆ, ಡಿ. ೨೯: ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ಪ್ರಾರಂಭವಾದಾಗಿನಿAದ ಪಟ್ಟಣದ ಜೇಸೀ ವೇದಿಕೆಯಲ್ಲಿ ಧರಣಿ ಆರಂಭಿಸಿದ್ದ ರೈತರು, ಸದ್ಯಕ್ಕೆ ತಮ್ಮ ಪ್ರತಿಭಟನೆಯನ್ನು ಕೈಬಿಟ್ಟಿದ್ದು, ೧೭ ದಿನಗಳಿಂದ ನಡೆಯುತ್ತಿದ್ದ ಸತ್ಯಾಗ್ರಹ ಅಂತ್ಯಗೊAಡಿದೆ. ಗದ್ದೆ-ತೋಟ ಗಳಲ್ಲಿರುವ ಫಸಲು ಕಟಾವು ಹಾಗೂ ಶಾಸಕದ್ವಯರು ನೀಡಿದ ಭರವಸೆ ಹಿನ್ನೆಲೆ ತಾತ್ಕಾಲಿಕವಾಗಿ ಧರಣಿ ಹಿಂಪ ಡೆದಿದ್ದು, ಸದ್ಯದಲ್ಲಿಯೇ ಮುಂದಿನ ಹೋರಾಟದ ಬಗ್ಗೆ ರೂಪುರೇಷೆ ಸಿದ್ಧ ಪಡಿಸುವುದಾಗಿ ರೈತ ಮುಖಂಡರು ಘೋಷಿಸಿದ್ದಾರೆ.
(ಮೊದಲ ಪುಟದಿಂದ) ಕಳೆದ ೧೭ ದಿನಗಳಿಂದ ಧರಣಿ ನಡೆಸುತ್ತಿದ್ದ ರೈತರು, ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿಯೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದ್ದರು. ೧೦ ಹೆಚ್.ಪಿ.ವರೆಗಿನ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸುವ ಬಗ್ಗೆ ಜಿಲ್ಲೆಯ ಶಾಸಕರುಗಳಾದ ಅಪ್ಪಚ್ಚುರಂಜನ್ ಹಾಗೂ ಕೆ.ಜಿ. ಬೋಪಯ್ಯ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದನ್ನು ಹೊರತುಪಡಿಸಿದರೆ ಇನ್ಯಾವ ಬೆಳವಣಿಗೆಯೂ ಆಗಿಲ್ಲ.
ನಿರಂತರವಾಗಿ ಧರಣಿ ನಡೆಸಿದರೂ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸರ್ಕಾರ ಗಂಭೀರವಾಗಿ ಪರಿಗಣಿಸದ ಹಿನ್ನೆಲೆ ಅಸಮಾಧಾನ ವ್ಯಕ್ತಪಡಿಸಿದ ರೈತ ಮುಖಂಡರು, ಇಂದು ಪಟ್ಟಣದಲ್ಲಿ ಪ್ರತಿಭಟನಾ ಜಾಥಾ ನಡೆಸಿ, ತಮ್ಮ ಬೇಡಿಕೆಗಳನ್ನು ಕೂಡಲೇ ಸರ್ಕಾರ ಈಡೇರಿಸಬೇಕೆಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರು ಇಂದು ಶಾಸಕರುಗಳೊಂದಿಗೆ ಮಾತುಕತೆ ನಡೆಸಿದ್ದು, ೧೦ ಹೆಚ್.ಪಿ.ವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸುವ ಸಂಬAಧ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗಿದ್ದು, ಈ ಬಗ್ಗೆ ಸದ್ಯದಲ್ಲಿಯೇ ಆದೇಶ ಹೊರಡಿಸುವುದಾಗಿ ಶಾಸಕರುಗಳು ಭರವಸೆ ನೀಡಿದ ಹಿನ್ನೆಲೆ ಪಟ್ಟಣದಲ್ಲಿ ಜಾಥಾ ನಡೆಸಿ, ಬಹಿರಂಗ ಸಭೆಯಲ್ಲಿ ಮತ್ತೊಮ್ಮೆ ಬೇಡಿಕೆಗಳ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸುವ ಮೂಲಕ ಧರಣಿಗೆ ಅಂತ್ಯ ಹಾಡಿದರು.
ಸದ್ಯಕ್ಕೆ ಧರಣಿಯನ್ನು ಹಿಂಪಡೆದಿದ್ದು, ಮುಂದಿನ ದಿನಗಳಲ್ಲಿ ಬೇಡಿಕೆ ಈಡೇರದಿದ್ದರೆ ವಿಧಾನಸೌಧ ಚಲೋ ನಡೆಸಲಾಗುವುದು. ಇದರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ, ಜಿಲ್ಲೆಯ ಶಾಸಕರುಗಳ ಮನೆ ಎದುರು ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಮನು ಸೋಮಯ್ಯ ಎಚ್ಚರಿಸಿದರು.
ಬೆಳಿಗ್ಗೆ ಇಲ್ಲಿನ ಕಕ್ಕೆಹೊಳೆ ಜಂಕ್ಷನ್‌ನಿAದ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು, ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಕಾಲ್ನಡಿಗೆ ತೆರಳಿ, ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನಂತರ ಜೇಸೀ ವೇದಿಕೆಯಲ್ಲಿ ಬಹಿರಂಗ ಸಭೆ ನಡೆಸಿ, ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಘೋಷಿಸಿದರು.
ಸಭೆಯಲ್ಲಿ ಮಾಜೀ ಸಚಿವ ಬಿ.ಎ. ಜೀವಿಜಯ ಭಾಗವಹಿಸಿ ಮಾತನಾಡಿ, ಕೊಡಗಿನ ರೈತರು ಆರ್ಥಿಕ ಸಂಕಷ್ಟದಲ್ಲಿದ್ದು, ಬೇಡಿಕೆಗಳ ಈಡೇರಿಕೆಗೆ ಇನ್ನಷ್ಟು ಸಂಘಟಿತರಾಗಬೇಕು. ಈಗಿನ ಬೇಡಿಕೆಗಳು ನ್ಯಾಯೋಚಿತವಾಗಿದ್ದು, ಸರ್ಕಾರ ಈಡೇರಿಸಲೇಬೇಕೆಂದು ಆಗ್ರಹಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಬಿ. ಗಣೇಶ್ ಮಾತನಾಡಿ, ೨೦೧೮ರಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು, ಕೊಡಗಿನ ಸಮಗ್ರ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡಿದ್ದರು. ಕೊಡಗಿನಲ್ಲಿ ಉಂಟಾದ ಜಲಪ್ರಳಯದಿಂದ ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದರಿಂದ ಪ್ರಾಧಿಕಾರ ರಚನೆಯಾಗಿತ್ತು. ಆದರೆ ನಂತರದ ದಿನಗಳಲ್ಲಿ ಅದು ಮೂಲೆಗುಂಪಾಯಿತು. ರೈತ ಸಂಘದಿAದ ಈ ಬಗ್ಗೆಯೂ ಹೋರಾಟ ರೂಪುಗೊಂಡರೆ, ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು ಎಂದು ಸಲಹೆ ನೀಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಮಾತನಾಡಿ, ರೈತರು ಒಗ್ಗಟ್ಟಾಗದಿದ್ದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಕಳೆದ ೨೦ ವರ್ಷಗಳಿಂದಲೂ ಕೊಡಗಿನಲ್ಲಿ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ಅವರುಗಳನ್ನು ಕೊಡಗಿನ ಜನ ಬೆಂಬಲಿಸುತ್ತಾ ಬಂದಿದ್ದರೂ, ಇಲ್ಲಿನ ರೈತರ ಬೇಡಿಕೆಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸದಿರುವುದು ಸರಿಯಲ್ಲ. ಶೂನ್ಯ ವೇಳೆಯಲ್ಲಿ ಸರ್ಕಾರದ ಗಮನ ಸೆಳೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕು ರೈತ ಸಂಘದ ಕೆ.ಎಂ. ದಿನೇಶ್, ಆರ್‌ಎಂಸಿ ಸದಸ್ಯ ನಾಗರಾಜು, ಕಾರ್ಮಿಕ ಸಂಘಟನೆಯ ಪಿ.ಆರ್. ಭರತ್, ದಸಂಸ ಮುಖಂಡ ಕೆ.ಬಿ. ರಾಜು, ರೈತ ಹೋರಾಟಗಾರರಾದ ಹೂವಯ್ಯ ಮಾಸ್ಟರ್, ಎಸ್.ಪಿ. ರಾಜಪ್ಪ ಸೇರಿದಂತೆ ಇತರರು ಮಾತನಾಡಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಶಂಕ್ರಪ್ಪ, ಪ್ರಧಾನ ಕಾರ್ಯದರ್ಶಿ ಬೋಪಯ್ಯ, ಪದಾಧಿಕಾರಿಗಳಾದ ಲಿಂಗೇರಿ ರಾಜೇಶ್, ಕೆ.ಯು. ಚಂದ್ರಪ್ಪ, ಗಣಗೂರು ಚಂದ್ರಶೇಖರ್, ಪ್ರಸನ್ನ, ಐಗೂರು ಅಶೋಕ್, ಗರಗಂದೂರು ಲಕ್ಷö್ಮಣ್, ಹಾನಗಲ್ಲು ಶೆಟ್ಟಳ್ಳಿ ದಯಾನಂದ, ಯಡೂರು ಕುಶಾಲಪ್ಪ, ಕಿಬ್ಬೆಟ್ಟ ಮಂದಣ್ಣ, ಕಂಬಳ್ಳಿ ಸ್ವಾಗತ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು. ರೈತರ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕೆಂದು ಆಗ್ರಹಿಸಿ ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು ಅವರ ಮೂಲಕ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಪತ್ರವನ್ನು ಸಲ್ಲಿಸಲಾಯಿತು.