ಕುಶಾಲನಗರ, ಡಿ. ೨೯: ಶಾಲಾ ವಿದ್ಯಾರ್ಥಿಗಳು ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಕುರಿತು ಹೆಚ್ಚಿನ ಅಧ್ಯಯನ ನಡೆಸುವ ಮೂಲಕ ಕನ್ನಡ ಸಾಹಿತ್ಯ ಲೋಕದ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪ ನಿರ್ದೇಶಕ ಕೆ.ವಿ. ಸುರೇಶ್ ಕರೆ ನೀಡಿದರು. ಕುಶಾಲನಗರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮದ ಅಂಗವಾಗಿ ಶಾಲೆಯ ತ್ರಿವೇಣಿ ಭಾಷಾ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಸಾಹಿತ್ಯ ದಿಗ್ಗಜರು ಹಾಗೂ ರಾಷ್ಟç ನಾಯಕರ ಭಾವಚಿತ್ರಗಳ ಪ್ರದರ್ಶನದ ಮೂಲಕ ಏರ್ಪಡಿಸಿದ್ದ ಭಾವ ರಸಾನುಭವ ರಸಪ್ರಶ್ನೆ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಾಲಾ ಶಿಕ್ಷಕರ ಸಂವೇದನೆ ಮತ್ತು ಕ್ರಿಯಾಶೀಲತೆಯಿಂದ ರೂಪುಗೊಂಡ ಈ ಕಾರ್ಯಕ್ರಮ ಸಂಘಟಿಸಿದ ಚಿತ್ರಕಲಾ ಶಿಕ್ಷಕ ಉ.ರಾ. ನಾಗೇಶ್ ಮತ್ತು ಭಾಷಾ ಸಂಘದ ಶಿಕ್ಷಕ ವೃಂದದ ಸೇವಾ ಕಾರ್ಯವನ್ನು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪ ಪ್ರಾಂಶುಪಾಲ ವೈ.ಎಸ್. ಪರಮೇಶ್ವರಪ್ಪ ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ವೈವಿಧ್ಯಮಯ ಚಟುವಟಿಕೆಗಳ ಮೂಲಕ ಅವರ ಕಲಿಕೆಯನ್ನು ಉತ್ತಮಪಡಿಸಲು ಇಂತಹ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಸಂಘಟಕ ಚಿತ್ರಕಲಾ ಸಂಪನ್ಮೂಲ ಶಿಕ್ಷಕ ಉ.ರಾ. ನಾಗೇಶ್, ಮಕ್ಕಳು ತಮ್ಮನ್ನು ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮ ಕಲಿಕೆಯನ್ನು ಉದ್ದೀಪನಗೊಳಿಸಲು ಇಂತಹ ಪ್ರಯೋಗಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಕೂಡಿಗೆ ಡಯಟ್ ಸಂಸ್ಥೆಯ ಉಪನ್ಯಾಸಕ ಎಂ. ಕೃಷ್ಣಪ್ಪ ಮಾತನಾಡಿದರು. ಕನ್ನಡ ಭಾಷಾ ಶಿಕ್ಷಕಿಯರಾದ ಕೆ.ಆರ್. ದೇವಕಿ, ಬಿ.ಬಿ. ಹೇಮಲತಾ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಕರಾದ ಡಾ. ಸದಾಶಿವಯ್ಯ ಎಸ್. ಪಲ್ಲೇದ್, ಎ.ಸಿ. ಮಂಜುನಾಥ್, ಮಹೇಂದ್ರ, ದಿನೇಶ್ ಇತರರು ಇದ್ದರು.ರಸಪ್ರಶ್ನೆ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಕನ್ನಡ ನಾಡಿನ ಕವಿಗಳು, ಸಾಹಿತಿಗಳು, ಸಮಾಜ ಸುಧಾರಕರು ಹಾಗೂ ರಾಷ್ಟç ನಾಯಕರ ಭಾವಚಿತ್ರಗಳನ್ನು ಪ್ರದರ್ಶನಕ್ಕಿಟ್ಟು ಘೋಷವಾಕ್ಯಗಳನ್ನು ಬರೆಯಲಾಗಿತ್ತು.